ಕೋವಿಶೀಲ್ಡ್ ಲಸಿಕೆಯ‌ ವಿಶೇಷತೆ ಏನು? ಎಷ್ಟು ಅಗ್ಗ?

Public TV
2 Min Read

ನವದೆಹಲಿ: ಹೊಸ ವರ್ಷದ ಮೊದಲನೇ ದಿನವೇ ಭಾರತಕ್ಕೆ ಸಿಹಿಸುದ್ದಿ ಸಿಕ್ಕಿದೆ. ಹೆಮ್ಮಾರಿ ಕೊರೋನಾ ಹೊಡೆದೋಡಿಸಲು ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡುವ ಕ್ಷಣಗಳು ಹತ್ತಿರವಾಗಿವೆ. ಇಂದು ದೆಹಲಿಯಲ್ಲಿ ಸಭೆ ಸೇರಿದ್ದ ಡಿಸಿಜಿಐನ ವಿಷಯ ತಜ್ಞರ ಸಮಿತಿ ಕೋವಿಶೀಲ್ಡ್ ತುರ್ತು ಬಳಕೆಗೆ ಶಿಫಾರಸು ಮಾಡಿದೆ.

ಇದಕ್ಕೆ ಈಗ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಒಪ್ಪಿಗೆ ನೀಡುವುದು ಮಾತ್ರ ಬಾಕಿ ಉಳಿದಿದೆ. ಡಿಸಿಜಿಐ ಒಪ್ಪಿಗೆ ನೀಡಿದರೆ ಕೋವಿಶೀಲ್ಡ್ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಲಸಿಕೆ ಆಗಲಿದೆ.

ಪುಣೆಯ ಸಿರಂ ಸಂಸ್ಥೆ ಸಲ್ಲಿಸಿದ್ದ ಹೆಚ್ಚುವರಿ ದಾಖಲೆಗಳನ್ನು ಪರಿಶೀಲಿಸಿದ ಡಿಸಿಜಿಐ ವಿಷಯ ತಜ್ಞರ ಸಮಿತಿ, ಆಸ್ಟ್ರಾಜೆನಿಕಾ ವ್ಯಾಕ್ಸಿನ್ ತುರ್ತು ಬಳಕೆಗೆ ಅಸ್ತು ಅಂದಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ್ದು, ಇದನ್ನು ಪುಣೆಯ ಸಿರಂ ಸಂಸ್ಥೆ ಉತ್ಪಾದಿಸುತ್ತಿದೆ.

ಮೂರು ದಿನಗಳ ಹಿಂದಷ್ಟೇ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಆಸ್ಟ್ರಾಜೆನಿಕಾ ವ್ಯಾಕ್ಸಿನ್‍ಗೆ ಡಿಸಿಜಿಐನ ತಜ್ಞರ ಸಮಿತಿ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಒಂದೆರಡು ವಾರದಲ್ಲಿ ದೇಶದಲ್ಲಿ ಲಸಿಕೆ ಹಂಚಿಕೆ ಆಗೋದು ಬಹುತೇಕ ಖಚಿತವಾಗಿದೆ.

ಈ ಬಗ್ಗೆ ನಾಳೆ ನಾಡಿದ್ದರಲ್ಲಿ ಖುದ್ದು ಪ್ರಧಾನಿ ಮೋದಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಐದು ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು ಸಿರಂ ಸಂಸ್ಥೆ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರ ಆರಂಭಿಕ ಹಂತದಲ್ಲಿ 2 ಕೋಟಿ ಲಸಿಕೆ ಖರೀದಿಗೆ ಮುಂದಾಗಿದೆ.

ಇದೇ ವೇಳೆ, ದೇಶಿಯ ಕೊರೋನೌಷಧ ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆಗೆ ಇಂದು ಡಿಸಿಜಿಐ ವಿಷಯ ತಜ್ಞರ ಸಮಿತಿ ಅನುಮೋದನೆ ನೀಡಲಿಲ್ಲ. ಇದಕ್ಕೂ ಕೂಡ ಜನವರಿ 2ನೇ ವಾರದಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ. ಸದ್ಯ ಕೋವ್ಯಾಕ್ಸಿನ್‍ನ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಯುತ್ತಿದೆ.

ಕೋವಿಶೀಲ್ಡ್ ವಿಶೇಷತೆ
ಕೋವಿಶೀಲ್ಡ್ ಲಸಿಕೆ ಶೇ.70ರಷ್ಟು ಪರಿಣಾಮಕಾರಿಯಾಗಿದ್ದು 2 ರಿಂದ 8 ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹ ಮಾಡಬಹುದು. 6 ತಿಂಗಳು ಸಂಗ್ರಹಿಸಿಡಬಹುದಾಗಿದ್ದು, ಫೈಝರ್‌ಗಿಂ ಕೋವಿಶೀಲ್ಡ್ ಸಂಗ್ರಹ, ಸಾಗಣೆ ಸುಲಭ.

ಫೈಝರ್‌ಗಿಂತ ಶೇ.18 ಪಟ್ಟು ಕೋವಿಶೀಲ್ಡ್ ಅಗ್ಗವಾಗಿದ್ದು ಒಂದು ಡೋಸ್‍ಗೆ 3 ಡಾಲರ್(219 ರೂ.) ಇರಲಿದೆ. ಹಳೆಯ ತಂತ್ರಜ್ಞಾನ ಬಳಸಿ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿ ಮಾಡಲಾಗಿದೆ. ಭಾರತದಲ್ಲಿಯೇ ಸುಮಾರು 65 ಸಾವಿರ ಮಂದಿಗೆ ಕ್ಲಿನಿಕಲ್ ಟ್ರಯಲ್ಸ್ ನಡೆಸಲಾಗಿದೆ. ಮೊದಲ ಡೋಸ್ ನೀಡಿದ 4ರಿಂದ 12 ವಾರದಲ್ಲಿ 2ನೇ ಡೋಸ್ ಕೊಡಬೇಕು

ಕೊರೋನಾ ಲಸಿಕೆ ನಂತರ ಏನು?
ವ್ಯಾಕ್ಸಿನ್ ತೆಗೆದುಕೊಂಡ ತಕ್ಷಣ ರೋಗ ನಿರೋಧಕ ಶಕ್ತಿ ಬರಲ್ಲ. ವ್ಯಾಕ್ಸಿನ್ ತೆಗೆದುಕೊಂಡ 14 ದಿನಗಳಲ್ಲಿ ದೇಹದ ಮೇಲೆ ಔಷಧಿ ಪ್ರಭಾವ. ಕೇವಲ ಶೇ.50ರಷ್ಟು ಮಾತ್ರ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿ. 2ನೇ ಡೋಸ್ ಬಳಿಕ ಪೂರ್ಣ ಪ್ರಮಾಣದ ರೋಗ ನಿರೋಧಕ ಶಕ್ತಿ. ಹೀಗಾಗಿ ಅಮೆರಿಕಾ ನರ್ಸ್‍ಗೆ ಫೈಝರ್ ಲಸಿಕೆ ತೆಗೆದುಕೊಂಡ 6 ದಿನದಲ್ಲಿ ಸೋಂಕು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *