-ಮಿತಿ ಮೀರಿದ ಕೊರೊನಾ ಆರ್ಭಟ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಏರುತ್ತಿರುವ ಪರಿಣಾಮ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.
ಯುಕೆ, ಇಟಲಿ, ಪೆರು, ಜರ್ಮನಿ, ಫ್ರಾನ್ಸ್, ಟರ್ಕಿ ಇರಾನ್, ಚೀನಾ ಹಿಂದಿಕ್ಕಿದ್ದ ಭಾರತ ವಿಶ್ವದ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಇಂದು ದೇಶದ ಒಟ್ಟು 2,97,001 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ 2,89,360 ಸೋಂಕಿತರಿರುವ ಸ್ಪೇನ್ ದೇಶವನ್ನು ಹಿಂದಿಕ್ಕಿದೆ.
ಭಾರತದಲ್ಲಿ ಮೂರನೇ ಹಂತದ ಲಾಕ್‍ಡೌನ್ ನಿಂದ ಸೋಂಕಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಅನ್‍ಲಾಕ್ ಬಳಿಕ ಈ ಪ್ರಮಾಣದ ಏರಿಕೆಯಾಗಿದ್ದು ಪ್ರತಿ ನಿತ್ಯ ಸರಾಸರಿ 9,000 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಹಾಗೂ ಗುಜರಾತ್ ನಲ್ಲಿ ಸೋಂಕು ಮೀತಿ ಮೀರಿ ಹರಡಲು ಆರಂಭಿಸಿದ್ದು ಶುಕ್ರವಾರ ಮೂರು ಲಕ್ಷದ ಗಡಿ ದಾಟುವ ಎಲ್ಲ ಸಾಧ್ಯತೆಗಳಿವೆ.
ಸದ್ಯ ಅಮೆರಿಕ (2,074,397) ಮೊದಲ ಸ್ಥಾನದಲ್ಲಿ, ಬ್ರೆಜಿಲ್ (7,87,489) ಎರಡನೇ ಹಾಗೂ ರಷ್ಯಾ (5,02,436) ಮೂರನೇ ಸ್ಥಾನದಲ್ಲಿದ್ದು 2,97,001 ಸೋಂಕಿತರಿರುವ ಭಾರತ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಸ್ಪೇನ್ ನಲ್ಲಿ ಸೋಂಕು ಇಳಿಮುಖವಾಗಿದ್ದು ಆರನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ (291,409) ಐದನೇ ಸ್ಥಾನಕ್ಕೆ ಏರಿದೆ.
ಭಾರತದಲ್ಲಿ ಇನ್ನು ಸೋಂಕು ಸಮುದಾಯಕ್ಕೆ ಹರಡಿಲ್ಲ ದೇಶದ ಜನಸಂಖ್ಯೆ ಪೈಕಿ ಶೇ.1 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆತಂಕಪಡುವ ಆಗತ್ಯ ಇಲ್ಲ ಎಂದು ಐಸಿಎಂಆರ್ ಮತ್ತು ಆರೋಗ್ಯ ಇಲಾಖೆ ಹೇಳಿದೆ.