ಕೋವಿಡ್ ಸೋಂಕಿತರಿಗೆ ಉಚಿತ ಊಟ ನೀಡುತ್ತಿರುವ ದಂಪತಿ

Public TV
2 Min Read

ರಾಯಚೂರು: ಕೋವಿಡ್ ಸೋಂಕು ಧೃಡಪಟ್ಟಿದೆ ಅಂತ ತಿಳಿದರೆ ಸಾಕು ಅಕ್ಕಪಕ್ಕದ ಮನೆಯವರು ಸಹ ದೂರ ಉಳಿದು ಬಿಡ್ತಾರೆ. ಆದ್ರೆ ಮನೆಯಲ್ಲಿ ಒಬ್ಬಂಟಿಯಾಗಿರುವವರು, ವಯೋವೃದ್ದರು ಸೋಂಕು ತಗುಲಿದರೆ ಚಿಕಿತ್ಸೆ ಸಿಗಬಹುದು ಆದ್ರೆ ಊಟ ಸಿಗುವುದು ಮಾತ್ರ ಕಷ್ಟ. ಇದನ್ನ ಮನಗಂಡು ರಾಯಚೂರಿನ ಈ ದಂಪತಿ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ. ಅಗತ್ಯ ಇರುವವರು ಕರೆ ಮಾಡಿದರೆ ಇದ್ದಲ್ಲಿಗೆ ಹೋಗಿ ಊಟ, ತಿಂಡಿ ಉಚಿತವಾಗಿ ನೀಡುತ್ತಿದ್ದಾರೆ.

ರಾಯಚೂರಿನ ವಾಸವಿ ನಗರದ ಮುರುಳಿಕೃಷ್ಣ, ನಾಗಶ್ರಾವಂತಿ ದಂಪತಿ ಉಚಿತ ನೀಡುತ್ತಿದ್ದಾರೆ. ಕೋವಿಡ್ ಸೋಂಕಿತರ ಕಷ್ಟವನ್ನ ಕಣ್ಣಾರೆ ಕಂಡು ಅವರಿಗೆ ಸಹಾಯವಾಗಲಿ ಅಂತ ಒಂದು ತಿಂಗಳ ಮಟ್ಟಿಗೆ ಉಚಿತ ಊಟ, ತಿಂಡಿ ನೀಡುತ್ತಿದ್ದಾರೆ. ಏಪ್ರಿಲ್ 24 ರಿಂದ ಸೇವೆ ಆರಂಭಿಸಿದ್ದು ಇವರ ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡುವ ಕೋವಿಡ್ ಸೋಂಕಿತರ ಮನೆ, ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ಊಟವನ್ನು ಈ ದಂಪತಿ ನೀಡುತ್ತಿದ್ದಾರೆ. 20 ಜನರಿಗೆ ಆರಂಭವಾದ ಸೇವೆ ಈಗ 50 ಜನರನ್ನ ದಾಟಿದೆ.

ರೈಸ್‍ಮಿಲ್ ಹೊಂದಿರುವ ವೇಮುಲ್ ಮುರುಳಿಕೃಷ್ಣ ಇಂಥದ್ದೊಂದು ಸೇವೆ ಆರಂಭಿಸಲು ಮುಖ್ಯ ಕಾರಣ, ಕಳೆದ ವರ್ಷ ಕೊರೊನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ಅವರ ತಂದೆ ವೇಮುಲ ಮಧುಸೂಧನ್ ಗುಪ್ತಾ ಅನುಭವಿಸಿದ್ದ ಸಂಕಷ್ಟ. ಕೋವಿಡ್ ಸೋಂಕು ಹಿನ್ನೆಲೆ ತಂದೆಯನ್ನ ಅಕ್ಕಪಕ್ಕದ ಮನೆಯವರ ಆತಂಕಕ್ಕೆ ದೂರ ಇಡಬೇಕಾಯಿತು. ಆಗ ಅವರ ತಂದೆ ಊಟಕ್ಕೆ ಪರದಾಡುವ ಸ್ಥಿತಿ ಬಂದಿತ್ತು. ಹೀಗಾಗಿ ಈ ರೀತಿ ಯಾರೂ ತೊಂದರೆ ಅನುಭವಿಸಬಾರದು ಅಂತ ಕೈಲಾದ ಸೇವೆ ದಂಪತಿ ಮುಂದಾಗಿದ್ದಾರೆ.

ಆರಂಭದಲ್ಲಿ ಮನೆಯಲ್ಲೇ ಆಹಾರ ತಯಾರಿಸುತ್ತಿದ್ದರು ಆದ್ರೆ ನಿರ್ವಹಣೆ ಕಷ್ಟವಾಯಿತು. ಹೀಗಾಗಿ ಒಳ್ಳೆಯ ಹೋಟೆಲ್ ಒಂದನ್ನ ಆಯ್ಕೆ ಮಾಡಿಕೊಂಡು ಅವರ ಮೂಲಕ ಊಟದ ಪೊಟ್ಟಣ ಸಿದ್ಧ ಮಾಡಿಕೊಂಡು ಸ್ವತಃ ತಾವೇ ತೆರಳಿ ಸೋಂಕಿತರಿಗೆ ಊಟ ತಲುಪಿಸುತ್ತಿದ್ದಾರೆ. ಮೊಬೈಲ್ ಸಂಖ್ಯೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಊಟ ಅಗತ್ಯ ಇದ್ದವರು ಮೆಸೇಜ್ ಅಥವಾ ಕರೆ ಮಾಡುತ್ತಾರೆ. ವಿದೇಶಗಳಿಂದಲೂ ಕರೆಗಳು ಬರುತ್ತಿದ್ದು ಮನೆಯಲ್ಲಿರುವ ಸೋಂಕಿತ ಪೋಷಕರಿಗೆ ಊಟ ತಲುಪಿಸುವಂತೆ ಮಕ್ಕಳು ಕೇಳಿಕೊಳ್ಳುತ್ತಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ, ಕರೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಚಿಕಿತ್ಸೆ ಜೊತೆ ರೋಗಿಗಳಿಗೆ ಸರಿಯಾಗಿ ಊಟ, ಉಪಹಾರ ದೊರೆತರೆ ಖಂಡಿತ ಬೇಗ ಚೇತರಿಸಿಕೊಳ್ಳುತ್ತಾರೆ. ಹಣ ಇದ್ದರೂ ಅದರಿಂದ ಅನುಕೂಲ ಮಾಡಿಕೊಳ್ಳದಂತಹ ಪರಿಸ್ಥಿತಿಯಲ್ಲಿ ಬಹಳಷ್ಟು ರೋಗಿಗಳಿದ್ದಾರೆ. ಬೇರೆ ಊರಿನಿಂದ ಚಿಕಿತ್ಸೆಗಾಗಿ ಬಂದವರಿಗೆ ಸರಿಯಾಗಿ ಊಟ ಸಿಗುವುದೇ ಇಲ್ಲ. ಈ ಕಷ್ಟಗಳನ್ನ ಅರಿತು ವೇಮುಲ್ ಮುರುಳಿಕೃಷ್ಣ ದಂಪತಿ ಸೇವೆ ಆರಂಭಿಸಿದ್ದಾರೆ. ರಾಯಚೂರು ನಗರದಲ್ಲಿ ಊಟ ತಿಂಡಿಗೆ ತೊಂದರೆ ಅನುಭವಿಸುತ್ತಿರುವ ಸೋಂಕಿತರಿಗೆ ಆಹಾರದ ಅವಶ್ಯಕತೆ ಇದ್ದರೆ ಮುರುಳಿಕೃಷ್ಣ ಮೊಬೈಲ್ ಸಂಖ್ಯೆ 9739422692 ಕ್ಕೆ ಮೆಸೇಜ್ ಮಾಡಬಹುದು.

Share This Article
Leave a Comment

Leave a Reply

Your email address will not be published. Required fields are marked *