ಮೈಸೂರು : ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಮಾಡಿರುವ ಮೈಸೂರು ಜಿಲ್ಲಾಡಳಿತ ವಿನೂತನ ಟಾಸ್ಕ್‌ಗಳನ್ನು ಶುರು ಮಾಡಿದೆ. ಕೊರೊನಾ ಮುಕ್ತ ವಾರ್ಡ್‍ಗಳಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಸಂಪೂರ್ಣ ಕೊರೊನಾ ಮುಕ್ತವಾಗುವ 3 ವಾರ್ಡ್‍ಗಳಿಗೆ ತಲಾ ರೂ. 1,00,000ಗಳ ಪ್ರೋತ್ಸಾಹಧನ ನೀಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಘೋಷಿಸಿದ್ದಾರೆ.
ವಾರ್ಡ್‍ನಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಈ ಹಣ ಬಳಸಬಹುದು. ಅಲ್ಲದೆ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅದೇ ರೀತಿ ಸಂಪೂರ್ಣ ಕೊರೊನಾ ಮುಕ್ತವಾಗುವ ಗ್ರಾಮಾಂತರ ಭಾಗದ ನಗರ ಸಭೆ, ಪುರಸಭೆ , ಪಟ್ಟಣ ಪಂಚಾಯಿತಿಯ ವಾರ್ಡ್‍ಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ರೂ.25,000ಗಳ ಪ್ರೋತ್ಸಾಹಧನ ಘೋಷಣೆ ಮಾಡಿದ್ದಾರೆ.
ಸಮುದಾಯದ ಸಹಭಾಗಿತ್ವದಲ್ಲಿ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ, ನಗರ, ಪಟ್ಟಣಗಳ ಸ್ಥಳೀಯ ಪ್ರಾಧಿಕಾರಗಳ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಮೈಸೂರು ಜಿಲ್ಲಾಡಳಿತ ರಚಿಸಿದ್ದು, ಈ ಟಾಸ್ಕ್ ಫೋರ್ಸ್ ಸಮಿತಿಗಳ ಕಾರ್ಯ ಕ್ಷಮತೆ ಹೆಚ್ಚಿಸಲು ಈ ಪ್ರೋತ್ಸಾಹ ಧನ ಘೋಷಿಸಿದೆ. ಕಂಪನಿಗಳ ಸಿಎಸ್‍ಆರ್ ಹಣದಲ್ಲಿ ಕೋವಿಡ್ ಮುಕ್ತ ಗ್ರಾಮ ಪಂಚಾಯಿತಿ ಪುರಸ್ಕಾರ, ಕೋವಿಡ್ ಮುಕ್ತ ವಾರ್ಡ್ ಪುರಸ್ಕಾರ ಹಾಗೂ ಉತ್ತಮ ಕೋವಿಡ್ ಮಿತ್ರ ಕಾಯಕ ಪುರಸ್ಕಾರ ನೀಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.