ಕೋವಿಡ್ ನಿರ್ವಹಣೆಯಲ್ಲಿ ಕಿಮ್ಸ್ ರಾಜ್ಯಕ್ಕೆ ಮಾದರಿ: ಪ್ರಹ್ಲಾದ್ ಜೋಶಿ

Public TV
1 Min Read

ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ನ ಎಲ್ಲಾ ವೈದ್ಯರು ರೋಗಿಗಳ ಬಗೆಗೆ ಬಹಳ ಮುತುವರ್ಜಿ ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಗಂಭೀರ ಪ್ರಕರಣಗಳನ್ನು ಸಹ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವೈದ್ಯಕೀಯ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ಸರ್ಕ್ಯೂಟ್ ಹೌಸಿನಲ್ಲಿ ಇಂದು ಬೆಳಗಾವಿಯ ಏಕಸ್ ಇನ್ಫ್ರಾ ಮತ್ತು ಏಕಸ್ ಫೌಂಡೇಶನ್ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ನೀಡಿದ ಹೈ ಫ್ಲೋ ನಾಸಲ್ ಆಕ್ಸಿಜನ್ ಉಪಕರಣಗಳನ್ನು ಕಿಮ್ಸ್ ಸಂಸ್ಥೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಕಿಮ್ಸ್ ಸಂಸ್ಥೆಯನ್ನು ನಾಡಿಗೆ ಸಂಜೀವಿನಿಯಾಗುವಂತೆ ಮಾದರಿಯಾಗಿ ರೂಪಿಸಿದ್ದಾರೆ ಎಂದು ಹಾಡಿ ಹೊಗಳಿದರು.

ಕೋವಿಡ್‍ನಿಂದ ಗಂಭೀರವಾಗಿ ಬಳಲುತ್ತಿದ್ದ ರಾಜಕೀಯ ಪಕ್ಷದ ಜನಪ್ರತಿನಿಧಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿರಲಿಲ್ಲ. ಕೊನೆಗೆ ಕಿಮ್ಸ್ ನಲ್ಲಿ ಅವರು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂತಹ ಸಹಸ್ರಾರು ಪ್ರಕರಣಗಳಲ್ಲಿ ಕಿಮ್ಸ್ ವೈದ್ಯರು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ರೋಗಿಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯಗಳ ಅವಶ್ಯಕತೆ ಮತ್ತು ಗಂಭೀರತೆ ಬಗ್ಗೆ ಜಿಲ್ಲಾಡಳಿತ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಏಕಸ್ ಸೇರಿದಂತೆ ನಾನಾ ಕಂಪನಿಗಳನ್ನು ಸಂಪರ್ಕಿಸಿ ಸಿಎಸ್‍ಆರ್ ಅಡಿ ಅನುದಾನ ಒದಗಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಏಕಸ್ ಫೌಂಡೇಶನ್ ನಿರ್ದೇಶಕ ಪ್ರವೀಣಕುಮಾರ್ ನಾಯಕ, ಏಕಸ್ ಕಂಪನಿ ಉಪಾಧ್ಯಕ್ಷ ಬಸವರಾಜ ಸುಗಂ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಚವ್ಹಾಣ, ಡಾ.ಎಸ್.ವೈ. ಮುಲ್ಕಿಪಾಟೀಲ, ಡಾ.ರಾಜಶೇಖರ ದ್ಯಾಬೇರಿ, ಡಾ.ಲಕ್ಷ್ಮೀಕಾಂತ ಲೋಕರೆ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *