ಕೋವಿಡ್‌ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ

Public TV
2 Min Read

ಜಿನಿವಾ: ಕೊರೊನಾ ವಿಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವ ಚೀನಾ ಮತ್ತೊಂದು ಮಹಾ ಕಳ್ಳಾಟ ಈಗ ಬಯಲಾಗಿದೆ. ಹುಬೆ ಪ್ರಾಂತ್ಯದ ವುಹಾನ್‌ನಲ್ಲಿ ವೈರಸ್‌ ಇದೆ ಎಂಬ ವಿಚಾರ ವಿಶ್ವ ಆರೋಗ್ಯ ಸಂಸ್ಥೆಗೆ ಗೊತ್ತಾಗಿದ್ದು ಚೀನಾದಲ್ಲಿರುವ ತನ್ನ ಸಂಸ್ಥೆಯ ಕಚೇರಿಯಿಂದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಯಾವುದೇ ಮಾರಣಾಂತಿಕ ಕಾಯಿಲೆ ಬಂದಾಗ ಸರ್ಕಾರಗಳು ಡಬ್ಲ್ಯೂಎಚ್‌ಒಗೆ ಮಾಹಿತಿ ನೀಡಬೇಕು. ಆದರೆ ಕೊರೊನಾ ವೈರಸ್‌ ಬಂದಿರುವ ವಿಚಾರವನ್ನು ಆರಂಭದಲ್ಲೇ ಚೀನಾ ಮರೆಮಾಚಿತ್ತು.

ಕೊರೊನಾ ವೈರಸ್‌ ವಿಚಾರದಲ್ಲಿ ಮೊದಲ ಮಾಹಿತಿ ಚೀನಾ ಸರ್ಕಾರದಿಂದ ಬಂದಿರಲಿಲ್ಲ. ಚೀನಾದಲ್ಲಿರುವ ನಮ್ಮ ಕಚೇರಿಯಿಂದ ಮಾಹಿತಿ ಸಿಕ್ಕಿತ್ತು ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಡಬ್ಲ್ಯೂಎಚ್‌ಒ ಹೇಳಿದ್ದು ಏನು?
2019ರ ಡಿಸೆಂಬರ್‌ 31 ರಂದು ಚೀನಾ ಮಾಧ್ಯಮಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದ ನ್ಯೂಮೋನಿಯಾ ಮಾದರಿಯ ಸೋಂಕು ಹರಡುವಿಕೆಯ ಬಗ್ಗೆ ಮಾಹಿತಿ ನೀಡುವಂತೆ ಜನವರಿ 1 ಮತ್ತು 2 ರಂದು ಸರ್ಕಾರವನ್ನು ಕೇಳಿದ್ದೇವು. ಜ. 3 ರಂದು ಚೀನಾ ನಮಗೆ ಈ ರೀತಿಯ ಸೋಂಕಿನ ಮಾಹಿತಿಯನ್ನು ತಿಳಿಸಿತ್ತು ಎಂದು ಡಬ್ಲ್ಯೂಎಚ್‌ಒ ಹೇಳಿದೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಚೀನಾದಿಂದ ಸುಳ್ಳು ಮಾಹಿತಿ – 5 ದೇಶಗಳ ಗುಪ್ತಚರ ವರದಿಯಲ್ಲಿದೆ ಸ್ಫೋಟಕ ವಿಷಯ

ವುಹಾನ್​ನಲ್ಲಿ ಸಾರ್ಸ್​ ರೀತಿಯ ರೋಗ ಹರಡುತ್ತಿದೆ ಎಂದು ವೈದ್ಯ ಲಿ ವೆನ್ಲಿಯಾಂಗ್ ಶಂಕೆ ವ್ಯಕ್ತಪಡಿಸಿದ್ದರು. 34 ವರ್ಷದ ಕಣ್ಣಿನ ವೈದ್ಯರಾಗಿದ್ದ ಲಿ ವೆನ್ಲಿಯಾಂಗ್ ಡಿಸೆಂಬರ್ 30ರ ವೇಳೆ ಈ ಮಾರಕ ವೈರಸ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಮೆಸೆಜಿಂಗ್​ ಆ್ಯಪ್​ ವೀಚ್ಯಾಟ್​ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.

ಸಾರ್ಸ್ ರೀತಿಯ ಹೊಸ ರೋಗ ಲಕ್ಷಣ ಹೊಂದಿರುವ 7 ಮಂದಿ ರೋಗಿಗಳನ್ನು ನಾನು ಗುರುತಿಸಿದ್ದೇನೆ. ಹೀಗಾಗಿ ಸುರಕ್ಷಾ ಸಾಧನಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಜಾಗೃತಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಜನವರಿ 1 ರಂದು ಡಾ. ಲಿ ವೆನ್ಲಿಯಾಂಗ್ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖಂಡಿಸಲಾಗಿತ್ತು. ವುಹಾನ್ ಮುನ್ಸಿಪಾಲ್ ಆರೋಗ್ಯ ಆಯೋಗ ಪ್ರಾಥಮಿಕ ತನಿಖೆಯಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಹೇಳಿತ್ತು.

ಚೀನಾದ ಹೇಳಿಕೆಯನ್ನು ಜನವರಿ 14ರಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಸಮರ್ಥಿಸಿಕೊಂಡು ಪ್ರಾಥಮಿಕ ತನಿಖೆಯಲ್ಲಿ ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವ ಬಗ್ಗೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿತ್ತು. ಇದಾದ ಬಳಿಕ ಫೆ.6 ರಂದು ಕೊರೊನಾ ವೈರಸ್ ಬಗ್ಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ ವೈದ್ಯ ಲಿ ವೆನ್ಲಿಯಾಂಗ್ ಮೃತಪಟ್ಟಿದ್ದರು.

ಆರಂಭದಲ್ಲಿ ಕೊರೊನಾ ವೈರಸ್‌ ಕುರಿತ ಸುದ್ದಿ ತಡೆಗಟ್ಟಲು ಚೀನಾ ಸರ್ಕಾರ ಇಂಟರ್‌ನೆಟ್‌ ಸೆನ್ಸಾರ್‌ ಮಾಡಿತ್ತು. ಕೊರೊನಾ ವೈರಸ್‌ ಕುರಿತ ಸುದ್ದಿಗಳು, ಕೀ ವರ್ಡ್‌ಗಳು ಓಪನ್‌ ಆಗದೇ ಬ್ಲಾಕ್‌ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *