ಕೋಲಾರ ಟೊಮೆಟೊಗೆ ಅಂತರ್ ರಾಜ್ಯ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ

Public TV
2 Min Read

– ಸೇಬು ಬೆಲೆಗೆ ಮಾರಾಟವಾಗುತ್ತಿದೆ ಟೊಮೆಟೊ

ಕೋಲಾರ: ಅಡುಗೆಗೆ, ಊಟಕ್ಕೆ ಟೊಮೆಟೊ ಅತ್ಯವಶ್ಯಕವಾಗಿದ್ದು, ಈ ಕಿಚನ್ ಕ್ವೀನ್ ಇಲ್ಲದೆ ಅಡುಗೆ ಸಪ್ಪೆ. ಆದರೆ ಇದೀಗ ಟೊಮಾಟೊ ಬೆಲೆ ಗಗನಕ್ಕೇರಿದೆ. ದೇಶದ ಅತ್ಯಂತ ದೊಡ್ಡ ಟೊಮೆಟೊ ಮಾರುಕಟ್ಟೆಯಲ್ಲಿ ಸೇಬು ಬೆಲೆಗೆ ಮಾರಾಟವಾಗುತ್ತಿದೆ.

ಕೋಲಾರ ಸೇರಿದಂತೆ ಸುತ್ತಲಿನ ರೈತರಿಗೆ ಇದರಿಂದಾಗಿ ಅಪಾರ ಲಾಭವಾಗುತ್ತಿದ್ದು, 15 ಕೆ.ಜಿ. ತೂಕದ ಒಂದು ಟೊಮೆಟೊ ಕ್ರೇಟ್‍ನ ಬೆಲೆ ಈಗ 800 ರೂಪಾಯಿಯ ಗಡಿ ದಾಟಿದೆ. ಒಂದು ಕೆ.ಜಿ. ಟೊಮೆಟೊ ಬೆಲೆ ಈಗ ಹೋಲ್‍ಸೇಲ್ ದರದಲ್ಲಿ 65 ರೂಪಾಯಿ ಧಾರಣೆಯಾಗಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ 15 ಕೆ.ಜಿ. ತೂಕದ ಒಂದು ಬಾಕ್ಸ್ ಟೊಮೆಟೊ 800 ರೂ.ಗಳಿಗೆ ಏರಿಕೆ ಆಗಿದೆ. ಕೊರೊನಾ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಟೊಮ್ಯಾಟೊ ಬೆಳೆದಿದ್ದ ರೈತರು ಕಂಗಾಲಾಗಿದ್ದರು.

ನೀರಿನ ಅಭಾವ, ಅಂತರ್ಜಲ ಮಟ್ಟ ಕುಸಿದಿದ್ದರೂ, 1,500 ಅಡಿ ಆಳದಿಂದ ನೀರು ತೆಗೆದು ಕಷ್ಟಪಟ್ಟು ಬೆಳೆಯುತ್ತಿದ್ದಾರೆ. ಹೀಗಾಗಿ ಇಲ್ಲಿನ ಟೊಮೆಟೊಗೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಮುಂತಾದ ರಾಜ್ಯಗಳು. ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಹೆಚ್ಚಾಗಿ ಬೇಡಿಕೆ ಇದೆ. ಇದರಿಂದಾಗಿ ಈ ಸೀಸನ್‍ನಲ್ಲಿ ಸ್ಥಳೀಯ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತಿದ್ದು, ಟನ್‍ಗಟ್ಟಲೆ ಟೊಮೆಟೊ ರಫ್ತು ಮಾಡಲಾಗುತ್ತದೆ. ಹೊರ ರಾಜ್ಯಗಳಲ್ಲಿ ಮಳೆಯಿಂದ ಟೊಮೆಟೊ ಬೆಳೆ ಇಲ್ಲ. ಹೀಗಾಗಿ ಈ ಸೀಸನ್‍ನಲ್ಲಿ ಕೋಲಾರದ ಟೊಮೆಟೊ ಬೆಲೆ ಗಗನಕ್ಕೇರಿದೆ.

ಜಿಲ್ಲೆಯಲ್ಲಿ ಸೀಡ್ಸ್ ಮತ್ತು ನಾಟಿ ಟೊಮೆಟೊ ಬೆಳೆಯಲಾಗುತ್ತದೆ. ಈ ಎರಡು ಉತ್ತಮ ತಳಿಗಳು ಒಂದು ವಾರ ಕಾಲ ಕೆಡದಂತೆ ಇರುತ್ತದೆ. ಪ್ರತಿನಿತ್ಯ 14 ರಿಂದ 15 ಸಾವಿರ ಕ್ವಿಂಟಾಲ್ ನಷ್ಟು ಟೊಮೆಟೊ ಮಾರುಕಟ್ಟಗೆ ಬರುತ್ತಿದ್ದು, ನಿತ್ಯ ಸರಾಸರಿ 3 ಕೋಟಿಯಷ್ಟು ವಹಿವಾಟು ನಡೆಯುತ್ತದೆ. ಮಾರ್ಚ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಟೊಮೆಟೊ ಬೆಳೆಯಲು ಕಷ್ಟವಾಗುತ್ತದೆ. ಈ ರಾಜ್ಯಗಳಲ್ಲಿ ಹೆಚ್ಚು ಬಿಸಿಲು, ಒಂದು ಕಡೆ ಮಳೆ ಇರುವುದರಿಂದ ಟೊಮೆಟೊ ಬೆಳೆಯಲು ಪೂರಕ ವಾತಾವರಣ ಇಲ್ಲ. ಹೀಗಾಗಿ ರಾಜ್ಯದಲ್ಲಿ ಬೆಳೆದ ಬೆಳೆಗೆ ಹೆಚ್ಚು ಬೇಡಿಕೆ.

ಕೋಲಾರ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಈ ಬಾರಿ ಬಿಸಿಲು ಹೆಚ್ಚಾಗಿದ್ದರಿಂದ ಬೆಳೆ ಕೂಡ ಉತ್ತಮವಾಗಿದೆ, ಇದರಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಲ್ಲಿ ಕೊರೊನಾ ಭೀತಿ ಇರುವುದರಿಂದ ಬೆಲೆ ಏರಿಕೆ ನಿಧಾನಗತಿಯಲ್ಲಿ ಏರುತ್ತಿದೆ. ಇನ್ನು 15 ದಿನಗಳ ನಂತರ ಟೊಮೆಟೊ ಬೆಲೆ ಒಂದು ಬಾಕ್ಸ್‍ಗೆ 1000 ರೂ.ಗಳಿಗೆ ಏರಿಕೆ ಆದಲಿದೆ ಎಂದು ಅಂದಾಜಿಸಲಾಗಿದೆ.

ಕೋಲಾರದ ರೈತರಿಗೆ ಟೊಮೆಟೊ ಬೆಳೆ ಲಾಟರಿಯಂತಾಗಿದ್ದು, ಒಮ್ಮೆ ಬೆಲೆ ಸಿಕ್ಕರೆ, ಮತ್ತೊಮ್ಮೆ ಬೆಲೆ ಕುಸಿಯುತ್ತದೆ. ಈ ವೇಳೆ ಬೀದಿಗೆ ಸುರಿಯುತ್ತಾರೆ. ಆದರೆ ಈ ಬಾರಿ ಬೆಳೆದ ರೈತರಿಗೆ ಭರ್ಜರಿ ಬೆಲೆಯೇ ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *