ಕೋಲಾರದಲ್ಲಿ ಮೂವರು ವೈದ್ಯರಿಗೆ ಕೊರೊನಾ ಸೋಂಕು

Public TV
1 Min Read

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ತಗುಲಿದ್ದು, ಇದರಿಂದಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಭಯಭೀತರಾಗಿದ್ದಾರೆ.

ನಗರದ ಆರ್.ಎಲ್.ಜಾಲಪ್ಪಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮೂವರು ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯ ವೈದ್ಯರಲ್ಲಿ ಆತಂಕ ಮನೆ ಮಾಡಿದೆ. ಅತಿಯಾದ ಹೊಟ್ಟೆ ನೋವಿನಿಂದ ತುರ್ತು ಚಿಕಿತ್ಸೆಗೆಂದು ಕೋಲಾರ ತಾಲೂಕಿನ ಜಂಗಮಗುರ್ಜೇನಹಳ್ಳಿ ಗ್ರಾಮದ 50 ವರ್ಷದ ಮಹಿಳೆ ಕೋಲಾರದ ಆರ್.ಎಲ್.ಜಾಲಪ್ಪಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಹಿಳೆಯ ಪರಿಸ್ಥಿತಿಗೆ ಸ್ಪಂದಿಸಿದ್ದ ವೈದ್ಯರು, ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರು. ನಂತರ ಮಹಿಳೆಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಹಿಳೆಗೆ ಕೊರೊನಾ ತಗುಲಿರುವುದು ದೃಢವಾಗಿದೆ.

ಇದರಿಂದ ಆತಂಕಗೊಂಡಿದ್ದ ಆರ್.ಎಲ್.ಜಾಲಪ್ಪಾ ಸಿಬ್ಬಂದಿ ಮತ್ತು ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಸಿಬ್ಬಂದಿಯನ್ನು ಕೋವಿಡ್-19 ಟೆಸ್ಟ್‍ಗೆ ಒಳಪಡಿಸಿದ್ದಾರೆ. ಈ ವೇಳೆ ಮಹಿಳೆಗೆ ಆಪರೇಷನ್ ಮಾಡಿದ್ದ ಮೂವರು ವೈದ್ಯರಿಗೂ ಕೊರೊನಾ ತಗುಲಿದೆ ಎಂಬ ಆತಂಕಕಾರಿ ಸುದ್ದಿ ಹೊರ ಬಿದ್ದಿದೆ. ಮೂವರು ವೈದ್ಯರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಆಸ್ಪತ್ರೆಯ 22ಕ್ಕೂ ಹೆಚ್ಚು ಜನ ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೇನ್ ಮಾಡಲಾಗಿದೆ.

ವೈದ್ಯರು ಆಪರೇಷನ್ ಮಾಡುವ ವೇಳೆ ಪಿಪಿಇ ಕಿಟ್ ಧರಿಸಿಯೇ ಆಪರೇಷನ್ ಮಾಡಿದ್ದರು. ಕೊರೊನಾ ಹಿನ್ನೆಲೆ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಆದರೂ ಸೋಂಕು ತಗುಲಿದೆ. ಇದೀಗ ಆರ್.ಎಲ್.ಜಾಲಪ್ಪಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಯನ್ನು ಕೋವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದ್ದು, ಎಲ್ಲರ ರಕ್ತದ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಸಲಾಗಿದೆ.

ಆಪರೇಷನ್ ಥಿಯೇಟರಿಗೆ ಸೋಂಕು ನಿವಾರಕ ಸಿಂಪಡಿಸಿ ಮೂರು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಈ ನಡುವೆ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‍ಗೂ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ. ಹೀಗಾಗಿ ಕೋಲಾರದಲ್ಲಿ ವೈದ್ಯಕೀಯ ಸಿಬ್ಬಂದಿ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *