ಕೋಲಾರದಲ್ಲಿ ಕಾಣಿಸಿಕೊಂಡಿದ್ದು ಉತ್ತರ ಭಾರತದ ಮಿಡತೆ ಅಲ್ಲ: ಕೃಷಿ ವಿಜ್ಞಾನಿಗಳ ಸ್ಪಷ್ಟನೆ

Public TV
1 Min Read

ಕೋಲಾರ: ಮಹಾಮಾರಿ ಕೊರೊನಾದಿಂದ ಕಂಗಾಲಾಗಿದ್ದ ರೈತರಿಗೆ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಮಿಡತೆಗಳು ಇನ್ನಷ್ಟು ಆತಂಕಕ್ಕೀಡು ಮಾಡಿದ್ದವು. ಸ್ಥಳಕ್ಕೆ ರೈತ ಮುಖಂಡರು, ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸುವ ಮೂಲಕ ರೈತರ ಆತಂಕಕ್ಕೆ ತೆರೆ ಎಳೆದಿದ್ದಾರೆ. ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಳ ರಸ್ತೆ ಪಕ್ಕದಲ್ಲಿ ಮಿಡತೆಗಳ ಹಿಂಡು ಕಾಣಿಸಿಕೊಂಡಿವೆ. ಹಸಿರು ಮಿಶ್ರಿತ ಬಣ್ಣವನ್ನ ಹೋಲುವ ಮಿಡತೆಗಳು, ರಸ್ತೆ ಬದಿಯ ಎರಡು ಎಕ್ಕದ ಗಿಡ ಹಾಗೂ ವಿದ್ಯುತ್ ಕಂಬಕ್ಕೆ ಅಂಟಿಕೊಳ್ಳುವುದರ ಮೂಲಕ ರೈತರಲ್ಲಿ ಭೀತಿ ಸೃಷ್ಟಿಸಿವೆ. ಜೊತೆಗೆ ಮಿಡತೆಗಳು ಉತ್ತರ ಭಾರತದ ರಾಜ್ಯಗಳಲ್ಲಿ ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳನ್ನ ನಾಶ ಮಾಡಿದ್ದರಿಂದಾಗಿ, ಇಲ್ಲಿನ ರೈತರಲ್ಲಿ ಆತಂಕ ಶುರುವಾಗಿತ್ತು.

ಈ ಹಿನ್ನೆಲೆಯಲ್ಲಿ ರೈತರು, ಕೃಷಿ ವಿಜ್ಞಾನ ಕೇಂದ್ರ, ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವು ಹೆಚ್ಚಾಗಿ ಯಕ್ಕದ ಗಿಡದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮಿಡತೆಗಳಾಗಿದ್ದು, ಇದರಿಂದ ಯಾವುದೇ ಬೆಳೆಗಳಿಗೆ ಹಾನಿಯಾಗುವುದಿಲ್ಲ. ಇವು ಕ್ಯಾಲೋಟ್ರೋಫಿಸ್ ಗ್ರಾಸೋಫರ್ ಮಿಡತೆಗಳಾಗಿದ್ದು ರೈತರ ಬೆಳೆಗಳಿಗೆ ಯಾವುದೇ ತೊಂದರೆಯಾವುದಿಲ್ಲ ಎಂದು ಕೆವಿಕೆ ವಿಜ್ಞಾನಿಗಳ ತಂಡ ಹಾಗೂ ಕೇಂದ್ರ ಐಪಿಎಂ ವಿಜ್ಞಾನಿಗಳ ತಂಡ ಸ್ಪಷ್ಟೀಕರಣ ನೀಡಿತು.

ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆಗಳಿಗೂ ಕೋಲಾರದಲ್ಲಿ ಕಂಡು ಬಂದ ಮಿಡತೆಗಳಿಗೂ ಯಾವುದೇ ಸಂಭಂದವಿಲ್ಲದ ಪರಿಣಾಮ ರೈತರು ಆತಂಕ ಪಡುವ ಅಗತ್ಯ ಇಲ್ಲ. ಜೊತೆಗೆ ಮಿಡತೆಗಳು ಕಂಡು ಬಂದ ಗಿಡವನ್ನ ಸುಟ್ಟುಹಾಕಿ, ಔಷಧಿಗಳನ್ನ ಸಿಂಪಡಣೆ ಮಾಡಿದ್ದಾರೆ. ಇನ್ನೂ ಇವು ರೈತರ ಬೆಳೆಗಳಿಗೆ ಹಾನಿ ಮಾಡೋದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ, ಉತ್ತರ ಭಾರತದ ಮಿಡತೆಗಳಿಗೂ ಇದಕ್ಕೆ ವ್ಯತ್ಯಾಸವಿದೆ ಎಂದು ವಿಜ್ಞಾನಿಗಳು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *