ಕೋರ್ಟ್ ಮ್ಯಾಟರ್‌ಗಳು ಮುಗಿದ ಕೂಡಲೇ ವಿಶ್ವನಾಥ್, ಮುನಿರತ್ನ ಮಂತ್ರಿಯಾಗ್ತಾರೆ: ಉಮೇಶ್ ಕತ್ತಿ

Public TV
1 Min Read

ಬೆಂಗಳೂರು: ಕೆಲವೇ ದಿನಗಳಲ್ಲಿ ಮುನಿರತ್ನ ಕೂಡ ಮಂತ್ರಿಯಾಗುತ್ತಾರೆ. ಕೆಲವು ಕೋರ್ಟ್ ವ್ಯಾಜ್ಯಗಳಿವೆ ಅಂತ ಅವರನ್ನು ಮಂತ್ರಿ ಮಾಡಿಲ್ಲದಿರಬಹುದು. ವಿಶ್ವನಾಥ್ ಮತ್ತು ಮುನಿರತ್ನರ ಕೋರ್ಟ್ ಮ್ಯಾಟರ್ ಗಳು ಮುಗಿದ ಕೂಡಲೇ ಮಂತ್ರಿ ಆಗ್ತಾರೆ ಎಂದು ನೂತನ ಸಚಿವ ಉಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ 329, 329 ಎ ಕೊಠಡಿಗಳಲ್ಲಿ ಕುಟುಂಬ ಸಮೇತ ಇಂದು ಪೂಜೆ ನೆರವೇರಿಸಿ ಉಮೇಶ್ ಕತ್ತಿ ಕೊಠಡಿ ಪ್ರವೇಶ ಮಾಡಿದ್ದಾರೆ. ಖಾತೆ ಹಂಚಿಕೆಗೂ ಮುನ್ನವೇ ನಡೆದ ಈ ಪೂಜೆಯಲ್ಲಿ ಸಹೋದರ ರಮೇಶ್ ಕತ್ತಿಯೂ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕರ ಸಂಕ್ರಾಂತಿ, ಶುಭ ದಿನ ಅಂತ ಇಂದು ಪೂಜೆ ಇಟ್ಟುಕೊಂಡಿದ್ದೇನೆ. ಯಾವುದೇ ಖಾತೆ ಕೊಟ್ಟರೂ ಉತ್ತಮವಾಗಿ ನಿಭಾಯಿಸ್ತೇನೆ ಎಂದು ಭರವಸೆ ನೀಡಿದರು.

ಖಾತೆಗಳ ಅದಲು ಬದಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಯಾವ ಖಾತೆ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಖಾತೆಗಳ ಅದಲು ಬದಲು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು, ಸಿಎಂ ಕೊಡೋ ಖಾತೆಯನ್ನೇ ಚೆನ್ನಾಗಿ ನಿಭಾಯಿಸ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆಗೆ ಹಲವರ ಅಸಮಾಧಾನ ವಿಚಾರದ ಕುರಿತು ಮಾತನಾಡಿ, ರಾಜ್ಯದಲ್ಲಿ 34 ಜನರನ್ನ ಮಂತ್ರಿ ಮಾಡಬೇಕು. ಹಾಗಾಗಿಯೇ 34 ಜನ ಮಂತ್ರಿಗಳಾಗಿದ್ದಾರೆ. ಉಳಿದವರೂ ಮಂತ್ರಿಗಳಾಗ್ತಾರೆ. ನಿಷ್ಟಾವಂತರು, ಅಭಿಮಾನಿಗಳು, ಮಂತ್ರಿಗಳಾಗುವ ಇಚ್ಛೆ ಇರುವವರು ಮಂತ್ರಿ ಆಗುತ್ತಾರೆ. 224 ಶಾಸಕರಿಗೂ ಮಂತ್ರಿ ಸ್ಥಾನ ಸಿಗುತ್ತೆ. ಕಾಯಬೇಕು, ಕಾದರೆ ಮಂತ್ರಿ ಸ್ಥಾನ ಸಿಗುತ್ತೆ. ನಾನು ಒಂದೂವರೆ ವರ್ಷ ಕಾದೆ, ನಂತರವೇ ಸಿಕ್ಕಿದ್ದು. ಈಗ ಮಂತ್ರಿಯಾಗಿಲ್ವಾ ಒಂದಲ್ಲ ಒಂದು ದಿನ ಅಧಿಕಾರ ಬಂದೇ ಬರುತ್ತೆ ಎಂದು ತಿಳಿಸಿದರು.

ಯತ್ನಾಳ್, ವಿಶ್ವನಾಥ್ ರ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂದು ಒಳ್ಳೆಯ ದಿನ, ಮಕರ ಸಂಕ್ರಾಂತಿ ದಿನ. ಇಂದು ಒಳ್ಳೆಯ ಚಿಂತನೆ ಮಾಡಿ, ಒಳ್ಳೆಯ ವಿಚಾರಗಳ ಚರ್ಚೆ ಮಾಡಿ. ಉಳಿದ ವಿಚಾರಗಳು ಇವತ್ತು ಚರ್ಚೆ ಬೇಡ. ನಾಳೆ ಮಂತ್ರಿಯಾಗ್ತೇನೆ, ಇವತ್ತು ನಾನು ಸಂಕ್ರಾಂತಿ ಆಚರಣೆಯಲ್ಲಿ ಇದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *