ಕೋರ್ಟ್ ಆವರಣದಲ್ಲಿ ಕೋವಿಡ್ ಟೆಸ್ಟ್- ವರದಿ ಬಳಿಕವಷ್ಟೇ ನ್ಯಾಯಾಲಯಕ್ಕೆ ಎಂಟ್ರಿ

Public TV
1 Min Read

ಶಿವಮೊಗ್ಗ: ಎಲ್ಲೆಡೆ ಅಪಾಯಕಾರಿಯಾಗಿ ಹರಡುತ್ತಿರುವ ಕೊರೊನಾ ಮಹಾಮಾರಿ ವೈರಸ್‍ನ ನಿಯಂತ್ರಣಕ್ಕೆ ಶಿವಮೊಗ್ಗ ಸತ್ರ ನ್ಯಾಯಾಲಯ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಂಡಿದೆ. ಇಷ್ಟು ದಿನ ಆನ್‍ಲೈನ್ ಮೂಲಕ ಮತ್ತು ಕೋರ್ಟ್ ಒಳಭಾಗದಲ್ಲಿ ವಕೀಲರಿಗಷ್ಟೇ ಎಂಟ್ರಿ ನೀಡಿ ನಡೆಸಲಾಗುತ್ತಿದ್ದ ಕಲಾಪಕ್ಕೆ ಇದೀಗ ಕಕ್ಷಿದಾರರಿಗೂ ಅವಕಾಶ ನೀಡಲಾಗಿದೆ. ಆದರೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿ ನ್ಯಾಯಾಲಯಕ್ಕೆ ಪ್ರವೇಶ ನೀಡಲು ಅನುಮತಿ ನೀಡಲಾಗುತ್ತಿದೆ.

ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂಭಾಗದಲ್ಲಿಯೂ ಇದೀಗ ರ‍್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ನ್ಯಾಯಾಲಯದ ಆವರಣ ಪ್ರವೇಶಿಸುವ ಪ್ರತಿಯೊಬ್ಬ ವಕೀಲರು, ಕಕ್ಷಿದಾರರು, ಆರೋಪಿಗಳು ಸೇರಿದಂತೆ ಎಲ್ಲರೂ ಕೋರ್ಟ್ ಒಳಗೆ ಪ್ರವೇಶಿಸಬೇಕೆಂದರೆ ಕೋವಿಡ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯ. ಅಲ್ಲದೇ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ಕೋರ್ಟ್ ಕಲಾಪಕ್ಕೆ ಪ್ರವೇಶ ನೀಡಲಾಗುತ್ತಿದೆ. ಪರಿಣಾಮ ಸದಾ ಜನರಿಂದ ಗಿಜಿಗುಡುತ್ತಿದ್ದ ನ್ಯಾಯಾಲಯದ ಆವರಣ ಇದೀಗ ಖಾಲಿ ಖಾಲಿ ಹೊಡೆಯುತ್ತಿದೆ

ನಿನ್ನೆಯಿಂದ ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಶಿವಮೊಗ್ಗ ನ್ಯಾಯಾಲಯದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ 10 ಪ್ರಕರಣಗಳಷ್ಟೇ ತೆಗೆದುಕೊಳ್ಳುತ್ತಿರುವ ನ್ಯಾಯಾಲಯ, ಅಗತ್ಯ ಬಿದ್ದರಷ್ಟೇ ಕಕ್ಷಿದಾರರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದೆ. ಆದರೆ ಇದಕ್ಕೂ ಕೂಡ ಕೊರೊನಾ ಟೆಸ್ಟ್ ಕಡ್ಡಾಯವಾಗಿದೆ. ಈಗಾಗಲೇ ನಿನ್ನೆಯಿಂದ ಸುಮಾರು 100 ರಿಂದ 150 ಜನರಿಗೆ ಉಚಿತವಾಗಿ ರ‍್ಯಾಪಿಡ್ ಟೆಸ್ಟ್ ನಡೆಸಿದ್ದು, ಇದರಲ್ಲಿ ಸುಮಾರು ಐವರಿಗೆ ಪಾಸಿಟಿವ್ ಬಂದಿದೆ. ಕೋರ್ಟ್ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಕೂಡ ನೆಮ್ಮದಿ ಮತ್ತು ಧೈರ್ಯದಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ. ಇತರೇ ಸರ್ಕಾರಿ ಕಚೇರಿಗಳು ಕೂಡ, ಬಿಗಿ ಕ್ರಮ ತೆಗೆದುಕೊಳ್ಳುವ ಮೂಲಕ ಕೊರೊನಾ ನಿಯಂತ್ರಣ ಮಾಡಬೇಕಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *