ಕೋರ್ಟ್ ಆದೇಶಿಸಿದರೂ ಕೆರೆ ಒತ್ತುವರಿ ತೆರವುಗೊಳಿಸದ ಅಧಿಕಾರಿಗಳು

Public TV
2 Min Read

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಮಾದಾವರ ಗ್ರಾಮದ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಈಗಾಗಲೇ ಲೋಕಾಯಕ್ತ ಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೆ ಅಧಿಕಾರಿಗಳು ತೆರವು ಕಾರ್ಯ ಮಾತ್ರ ಮಾಡದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ ಎಂದು ದೂರುದಾರ ರಾಮಕೃಷ್ಣಯ್ಯ ಆರೋಪಿಸಿದ್ದಾರೆ.

ಮಾದಾವರ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಒತ್ತುವರಿ ತೆರವುಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮಾದಾವರ ಕೆರೆಯ ಚಿಕ್ಕಬಿದರಕಲ್ಲು ಸರ್ವೇ ನಂ 21ರಲ್ಲಿ ಇರುವ ಸುಮಾರು ಹತ್ತು ಎಕರೆ ಜಾಗವನ್ನು ಜಿಂದಾಲ್ ಸಂಸ್ಥೆಯು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡವನ್ನು ನಿರ್ಮಿಸಿದೆ.

ಈ ಬಗ್ಗೆ ಲೋಕಾಯುಕ್ತ ಕೋರ್ಟಿಗೆ 2009ರಲ್ಲಿ ದಾವೆ ಹೂಡಲಾಗಿತ್ತು. ಸುಮಾರು ಹತ್ತು ವರ್ಷಗಳ ಕಾಲ ವಾದ-ವಿವಾದಗಳನ್ನು ಆಲಿಸಿದ ಕೋರ್ಟ್, 2018ರಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತೀರ್ಪು ನೀಡಿತ್ತು. ಆದರೆ ಈ ತೀರ್ಪು ಬಂದು ಎರಡು ವರ್ಷ ಕಳೆದರೂ ಕೆರೆ ಒತ್ತುವರಿ ಕಾರ್ಯ ತೆರವುಗೊಳಿಸಿಲ್ಲ ಎಂದು ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಲು ಹೋರಾಟ ಮಾಡಿದ ತಿಪ್ಪನಹಳ್ಳಿ ಟಿ.ಎನ್ ರಾಮಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದರು.

ಮಾದಾವರ ಕೆರೆಯ ವಿಸ್ತೀರ್ಣವು ಚಿಕ್ಕಬಿದರಕಲ್ಲು, ದೊಡ್ಡಬಿದರಕಲ್ಲು, ತಿರುಮಲಾಪುರ ಗ್ರಾಮಗಳ ಸರ್ವೇ ನಂಬರ್ ಗಳಲ್ಲಿ ಹರಡಿದೆ. ಹತ್ತು ಎಕರೆ ಭೂ ಪ್ರದೇಶವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಿ ಒತ್ತುವರಿಯೂ ಒಂದು ಎಕರೆ 12 ಗುಂಟೆ ಇರುತ್ತದೆ. ಕೆರೆ ಜಾಗವು ಒತ್ತುವರಿ ಅಗಿರುವ ಬಗ್ಗೆ ಸರ್ಕಾರಿ ಅಧಿಕಾರಿಗಳೇ ಸಮಗ್ರ ವರದಿಯನ್ನು ಕೋರ್ಟಿಗೆ ನೀಡಿದ್ದಾರೆ. ಆದರೂ ತೆರವುಗೊಳಿಸುವುದು ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದರು.

ಕೆರೆ ಒತ್ತುವರಿ ತೆರವುಗೊಳಿಸುವಂತೆ ಆದೇಶವಿದ್ದರೂ ಜಿಂದಾಲ್ ಸಂಸ್ಥೆಯವರು ಕೆರೆ ಜಾಗದಲ್ಲಿ ಮತ್ತೆ ಕೆಲಸವನ್ನು ಮಾಡಲು ಮುಂದಾಗಿದ್ದರು. ಗ್ರಾಮಸ್ಥರ ಸಹಾಯದಿಂದ ಕೆರೆ ಜಾಗದಲ್ಲಿ ಕೆಲಸ ಮಾಡುವುದನ್ನು ತಡೆಗಟ್ಟಿದ್ದೇವೆ. ಕೆರೆ ಜಾಗವನ್ನು ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳು ಕಾಳಜಿ ತೋರಿಸುತ್ತಿಲ್ಲ. ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳು ಮಾದಾವರ ಕೆರೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಬೃಹತ್ ಕಟ್ಟಡವನ್ನು ಕೂಡಲೇ ತೆರವು ಮಾಡಿ ಮೂರು ನಾಲ್ಕು ಗ್ರಾಮದ ರೈತರು ಜನರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *