ಕೊಹ್ಲಿ Vs ವಾರ್ನರ್, ಬೇರ್ಸ್ಟೋವ್ Vs ಎಬಿಡಿ- ಆರ್‌ಸಿಬಿ, ಹೈದರಾಬಾದ್ ತಂಡಗಳ ಬಲಾಬಲ

Public TV
3 Min Read

ಅಬುಧಾಬಿ: ಇವತ್ತು ಐಪಿಎಲ್ ಸಿರೀಸ್‍ನಲ್ಲಿ ಆರ್‌ಸಿಬಿ ತನ್ನ ಮೊದಲ ಮ್ಯಾಚ್‍ಗಳನ್ನು ಆಡಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವತ್ತು ಸನ್‍ರೈಸರ್ಸ್ ಹೈದರಾವಾದ್ ತಂಡವನ್ನು ಎದುರಿಸಲಿದೆ. ಸನ್‍ರೈಸರ್ಸ್‍ಗೂ ಈ ಸಿರೀಸ್‍ನಲ್ಲಿ ಇದು ಮೊದಲ ಮ್ಯಾಚ್ ಆಗಿದೆ.

ಐಪಿಎಲ್ ಪಂದ್ಯಗಳ ಪಟ್ಟಿಯಲ್ಲಿ ಹೈದರಾಬಾದ್ ಹಾಗೂ ಬೆಂಗಳೂರು ತಂಡಗಳ ನಡುವಿನ ಪಂದ್ಯದ ಲೀಗ್ ಪ್ರಮುಖ ಕದನಗಳಲ್ಲಿ ಒಂದಾಗಿದ್ದು, ಎರಡು ತಂಡಗಳು ಟೂರ್ನಿಯಲ್ಲಿ ವರ್ಷಗಳಿಂದ ಗೆಲುವಿಗಾಗಿ ತೀವ್ರ ಹೋರಾಟಗಳನ್ನೇ ಮಾಡಿವೆ. ಅದರಲ್ಲೂ 2016 ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿ ಹೈದರಾಬಾದ್ ಕಪ್ ಗೆದ್ದಿತ್ತು. ಈ ಬಾರಿ ಇತ್ತಂಡಗಳು ಅತ್ಯುತ್ತಮ ಬ್ಯಾಟ್ಸ್ ಮನ್‍ಗಳ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಮತ್ತೊಂದು ರೋಚಕ ಪಂದ್ಯದ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದಾರೆ.

ಟೂರ್ನಿಯಲ್ಲಿ ಆರ್.ಸಿ.ಬಿ ಪರ ಆಸೀಸ್ ನಾಯಕ ಆರೋನ್ ಫಿಂಚ್, ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಕ್ರಿಸ್ ಮೋರಿಸ್ ಸೇರ್ಪಡೆಯಾಗಿದ್ದು, ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಇತ್ತ ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್, ಜಾನಿ ಬೇರ್ಸ್ಟೋವ್ ಪುನರ್ ಮಿಲನ ಆಗಿರುವುದು ತಂಡದ ಬಲವನ್ನು ಹೆಚ್ಚಿಸಿದೆ. 2019ರ ಆವೃತ್ತಿಯಲ್ಲಿ ಈ ಜೋಡಿ ಸರಾಸರಿ 150+ ಸ್ಟ್ರೇಕ್‍ನಲ್ಲಿ ರನ್ ಸಿಡಿಸಿತ್ತು. ಇಬ್ಬರನ್ನು ಕಟ್ಟಿ ಹಾಕಲು ನಾಯಕ ಕೊಹ್ಲಿ, ಉಮೇಶ್ ಯಾದವ್, ಡೇಲ್ ಸ್ಟೇನ್, ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಬಹುದಾಗಿದೆ.

ಕಳೆದ ಹಲವು ಆವೃತ್ತಿಗಳಲ್ಲಿ ಆರ್.ಸಿ.ಬಿ ತಂಡವನ್ನು ಬಹುವಾಗಿ ಕಾಡಿದ್ದ ಡೆತ್ ಓವರ್ ಬೌಲಿಂಗ್‍ಗೆ ಈ ಬಾರಿಯಾದರೂ ಕ್ರಿಸ್ ಮೋರಿಸ್ ರೂಪದಲ್ಲಿ ಪರಿಹಾರ ಲಭಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. 2017 ಟೂರ್ನಿಯಿಂದಲೂ ಡೆತ್ ಓವರ್ ಗಳಲ್ಲಿ 8.55ರ ಎಕಾನಮಿಯಲ್ಲಿ ಮೋರಿಸ್ ಬೌಲ್ ಮಾಡುತ್ತಿದ್ದಾರೆ. ಇತ್ತ ಆರ್.ಸಿ.ಬಿ ತಂಡದ ಕಳೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ದುಬೈ ಪಿಚ್‍ಗಳು ಬ್ಯಾಟ್ಸ್ ಮನಗಳಿಗೆ ತಕ್ಕಮಟ್ಟಿನ ನೆರವು ನೀಡಿದರೇ, ಸ್ಪಿನ್ನರ್ ಗಳಿಗೆ ಹೆಚ್ಚು ನೆರವಾಗಲಿದ್ದು, ಕೊಹ್ಲಿ ಹಾಗೂ ಎಬಿಡಿ ಸ್ಪಿನ್ ಬೌಲಿಂಗ್ ವಿರುದ್ಧ ಹೇಗೆ ಅಬ್ಬರಿಸಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ. ಆರ್.ಸಿ.ಬಿ ಬೌಲಿಂಗ್ ಪಡೆಗೆ ಡೇಲ್ ಸ್ಟೇನ್, ಯಾದವ್, ಸೈನಿ, ಚಹಲ್ ಅವರಿಗೆ ಆ್ಯಡಂ ಜಂಪಾ ಅಥವಾ ಸುಂದರ್, ನೇಗಿ ಜೊತೆಯಾಗುವ ಸಾಧ್ಯತೆ ಇದೆ. ಈ ಹಿಂದಿನ ಆವೃತ್ತಗಳಂತೆ ಹೈದರಾಬಾದ್ ತಂಡ ಬೌಲಿಂಗ್ ಪಡೆಯನ್ನೇ ನೆಚ್ಚಿಕೊಂಡಿದ್ದು, ಭುವಿ, ಖಲೀಲ್, ರಶೀದ್ ಖಾನ್‍ರೊಂದಿಗೆ ಸಿದ್ಧಾರ್ಥ್ ಕೌಲ್ ತಮ್ಮ ಕೈಚಳಕ ತೋರಿಸಲು ಸಿದ್ಧರಾಗಿದ್ದಾರೆ.

ಸಂಭಾವ್ಯ ತಂಡಗಳು ಇಂತಿವೆ:
ಆರ್.ಸಿ.ಬಿ: ಆರೋನ್ ಫಿಂಚ್, ದೇವದತ್, ಕೊಹ್ಲಿ, ಎಬಿ ಡಿವಿಲಿಯರ್ಸ್, ಮೋಯಿನ್ ಅಲಿ, ಶಿವಂ ದುಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಯಜುವೇಂದ್ರ ಚಹಲ್.

ಹೈದರಾಬಾದ್: ದೇವಿಡ್ ವಾರ್ನರ್, ಜಾನಿ ಬೇರ್ಸ್ಟೋವ್, ಮನೀಶ್ ಪಾಂಡೆ, ವಿಜಯ್ ಶಂಕರ್, ವಿರಾಟ್ ಸಿಂಗ್, ಮೊಹಮ್ಮದ್ ನಬೀ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಅಬ್ದುಲ್ ಸಮದ್.

Share This Article
Leave a Comment

Leave a Reply

Your email address will not be published. Required fields are marked *