ಕೊರೊನಾ 2ನೇ ಅಲೆಯಿಂದ ಹೆಲ್ತ್ ಎಮರ್ಜೆನ್ಸಿಗೆ ನಲುಗಿದ ಬೆಂಗಳೂರು..!

Public TV
3 Min Read

ಬೆಂಗಳೂರು: ನೈಟ್ ಕರ್ಫ್ಯೂ ಆಯ್ತು, ವೀಕೆಂಡ್ ಲಾಕ್‍ಡೌನ್ ಮುಗೀತು. ಸದ್ಯ ಜನತಾ ಲಾಕ್‍ಡೌನ್ ಶುರುವಾಗಿ 2 ದಿನಕ್ಕೆ ಕಾಲಿಟ್ಟಿದೆ. ಆದರೂ ಬೆಂಗಳೂರಿನ ಘನಘೋರ ಸ್ಥಿತಿ ಕೊಂಚವೂ ಬದಲಾಗಿಲ್ಲ. ಅದೇ ನರಳಾಟ, ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಗೋಚರಿಸ್ತಿದೆ. ಒಂದು ರೀತಿಯ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗಿಬಿಟ್ಟಿದೆ.

ಕೊರೊನಾ ತಂದಿಟ್ಟಿರುವ ಸಂಕಷ್ಟಗಳು ಒಂದೆರಡಲ್ಲ. ಸ್ವಾತಂತ್ರ್ಯೂೀತ್ತರ ಭಾರತದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ, ಇದೇ ಮೊದಲ ಬಾರಿಗೆ ದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. 1896ರಲ್ಲಿ ಭಾರತದಲ್ಲಿ ಪ್ಲೇಗ್ ಕಂಡು ಬಂದಾಗಿನ ಸ್ಥಿತಿಯನ್ನು ನೆನಪಿಸ್ತಿದೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ತಜ್ಞರು ಕಳೆದ ನವೆಂಬರ್‍ನಿಂದಲೇ ಎಚ್ಚರಿಸುತ್ತಾ ಬಂದಿದ್ದರೂ, ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮ, ಈಗ ಎದ್ದಿರುವ ಸೋಂಕು ಸುನಾಮಿಯನ್ನು ನಿಭಾಯಿಸಲು ಆಗದಷ್ಟು ಪರಿಸ್ಥಿತಿ ತಲೆದೋರಿದೆ.

ಯಾವುದಾದ್ರೂ ಒಂದು ವಿಭಾಗದಲ್ಲಿ ಸಮಸ್ಯೆ ಆಗಿದ್ರೆ ಏನೋ ಅನ್ನಬಹುದಿತ್ತು. ಆದರೆ ಸೋಂಕಿತರ ಸಂಖ್ಯೆಗೆ ತಕ್ಕಂತೆ ಬೆಡ್‍ಗಳಿಲ್ಲ, ಐಸಿಯುಗಳಿಲ್ಲ, ವೆಂಟಿಲೇಟರ್‍ಗಳು ಇಲ್ಲ.ಸೋಂಕಿತರಿಗೆ ಚಿಕಿತ್ಸೆ ನೀಡಲು ರೆಮ್ ಡೆಸಿವರ್ ಔಷಧಿ ಸಿಕ್ತಿಲ್ಲ. ಆಕ್ಸಿಜನ್ ಕೊರತೆ ಕೂಡ ದೊಡ್ಡ ಮಟ್ಟದಲ್ಲೇ ಇದೆ.. ಪರಿಣಾಮ, ದಿನೇ ದಿನೇ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸಾವು-ನೋವು ಹೆಚ್ಚುತ್ತಿದೆ.

ಬೆಡ್ ಸಮಸ್ಯೆ:
* ರಾಜ್ಯದಲ್ಲಿ ಕೋವಿಡ್‍ಗೆ ಮೀಸಲಾಗಿರುವ ಆಕ್ಸಿಜನ್ ಬೆಡ್ – 22,001
* ಖಾಲಿ ಇರುವ ಬೆಡ್‍ಗಳ ಸಂಖ್ಯೆ – 1730
* ರಾಜ್ಯದಲ್ಲಿರುವ ಐಸಿಯು, ಹೆಚ್‍ಡಿಯು, ಆಕ್ಸಿಜನ್ ಬೆಡ್ – 4373
* ಬೆಂಗಳೂರಿನಲ್ಲಿರುವ ಐಸಿಯು, ಹೆಚ್‍ಡಿಯು, ಆಕ್ಸಿಜನ್ ಬೆಡ್ – 2249
* ಬೆಂಗಳೂರಿನಲ್ಲಿ ಐಸಿಯು,ಹೆಚ್‍ಡಿಯು,ಆಕ್ಸಿಜನ್ ಬೆಡ್ ಖಾಲಿ – 165
* ರಾಜ್ಯ ಸರ್ಕಾರ ಹೊಸದಾಗಿ ಅಳವಡಿಸಿರುವ ವೆಂಟಿಲೇಟರ್ – 29 (ಕಳೆದ 2 ದಿನಗಳಲ್ಲಿ)

ಆಕ್ಸಿಜನ್ ಸಮಸ್ಯೆ:
* ಕರ್ನಾಟಕಕ್ಕೆ ಪ್ರತಿನಿತ್ಯ 1471 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯ (3.24 ಲಕ್ಷ ಸಕ್ರಿಯ ಕೇಸ್ ಪರಿಗಣಿಸಿದಾಗ, ಏಪ್ರಿಲ್ 30ರ ಹೊತ್ತಿಗೆ)
* ಆದರೆ ಆಕ್ಸಿಜನ್ ಉತ್ಪಾದನೆ ಕೆಪಾಸಿಟಿ 812 ಮೆಟ್ರಿಕ್ ಟನ್
* ಪ್ರತಿ ನಿತ್ಯ 650 ಮೆಟ್ರಿಕ್ ಟನ್ ಆಕ್ಸಿಜನ್ ಕೊರತೆ
* ಅಂದರೇ, ಶೇಕಡಾ 45ರಷ್ಟು ಆಕ್ಸಿಜನ್ ಕೊರತೆ
* ರಾಜ್ಯಕ್ಕೆ ಇದುವರೆಗೆ ಆಕ್ಸಿಜನ್ ಎಕ್ಸ್‍ಪ್ರೆಸ್ ಬಂದಿಲ್ಲ (802 ಮೆಟ್ರಿಕ್ ಟನ್ ಕಳಿಸಲು ಕೇಂದ್ರಕ್ಕೆ ಹೈಕೋರ್ಟ್ ಆದೇಶ ನೀಡಿದೆ)

ರೆಮ್‍ಡೆಸಿವರ್ ಸಮಸ್ಯೆ:
* ರಾಜ್ಯಕ್ಕೆ ಪ್ರತಿನಿತ್ಯ 20 ಸಾವಿರ ವಯಲ್ ಪೂರೈಕೆ
* ಸರ್ಕಾರಿ ಕೋಟಾದ ರೋಗಿಗಳಿಗೆ 10,000 ವಯಲ್
* ಖಾಸಗಿ ಆಸ್ಪತ್ರೆಗಳಿಗೆ ಉಳಿದ 10,000 ವಯಲ್
* ಮಂಗಳವಾರ 20,000 ವಯಲ್ ಪೂರೈಕೆ ಆಗಿಲ್ಲ
* ಕಾಳಸಂತೆಯಲ್ಲಿ 40,000 ರೂ.ವರೆಗೂ ಮಾರಾಟ
* ರಾಜ್ಯಕ್ಕೆ ಈಗ ಕನಿಷ್ಠ 30 ಸಾವಿರ ವಯಲ್ ತುರ್ತಾಗಿ ಬೇಕು
* ಈಗ ಕೇಂದ್ರ 25 ಸಾವಿರ ಚುಚ್ಚುಮದ್ದು ಕಳಿಸಲು ಒಪ್ಪಿದೆ.

ರಾಜ್ಯದಲ್ಲಿ ಎದುರಾಗಿರುವ ಹೆಲ್ತ್ ಎಮೆರ್ಜೆನ್ಸಿ ವಿಚಾರವಾಗಿಯೇ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯಿತು. ಕೋವಿಡ್ ನಿಯಂತ್ರಣ ಮತ್ತು ವೈದ್ಯಕೀಯ ಸವಲತ್ತುಗಳನ್ನು ಒದಗಿಸಲು ವಿಫಲವಾಗಿರುವ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಬೆಂಗಳೂರು ಸೇರಿ ರಾಜ್ಯದಲ್ಲಿ ಬೆಡ್ ಕೊರತೆ ನೀಗಿಸಲು ರೈಲ್ವೇ ಕೋಚ್‍ಗಳನ್ನು ಬಳಸಿಕೊಳ್ಳಿ. ರೈಲ್ವೇ ಕೋಚ್‍ಗಳು ಸಿದ್ದವಾಗಿದ್ದರೂ ಏಕೆ ಬಳಸಿಕೊಳ್ತಿಲ್ಲ, ಕೂಡ್ಲೇ ಬಳಸಿಕೊಳ್ಳಿ ಎಂದು ಸಲಹೆ ನೀಡಿತು. ಇದೇ ವೇಳೆ, ರೆಮ್‍ಡೆಸಿವರ್ ಲಭ್ಯತೆ ಇಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡಲಾಗ್ತಿದೆ. ಆಸ್ಪತ್ರೆಯವರೇ ಹೊರಗೆ ಖರೀದಿಸಿ ತನ್ನಿ ಅಂತಾರೆ ಎಂದು ದೂರುದಾರರ ಪರ ವಕೀಲರು ವಾದ ಮಂಡಿಸಿದ್ರು. ಇದಕ್ಕೆ ಹೈಕೋರ್ಟ್ ಗರಂ ಆಯ್ತು. ಹೊರಗಿನಿಂದ ಔಷಧಿ ತರೋದು ಸರಿಯಲ್ಲ ಎಂದು ಫನಾ ಅಧ್ಯಕ್ಷರಿಗೆ ಸೂಚಿಸಿತು. ಜೊತೆಗೆ ಖಾಸಗಿ ಆಸ್ಪತ್ರೆಗಳು ಖಾಲಿ ಬೆಡ್‍ಗಳ ಮಾಹಿತಿಯನ್ನು ಪ್ರಕಟಿಸಲೇಬೇಕು. 24 ಗಂಟೆಗಳಲ್ಲಿ ವೆಬ್‍ಸೈಟ್ ರೂಪಿಸಿ ಎಂದು ಫನಾಗೆ ಹೈಕೋರ್ಟ್ ಸೂಚನೆ ನೀಡಿತು.

Share This Article
Leave a Comment

Leave a Reply

Your email address will not be published. Required fields are marked *