ಕೊರೊನಾ ಹೊಡೆದೋಡಿಸಲು ಕರ್ನಾಟಕದಿಂದ ಅಸ್ತ್ರ ರೆಡಿ

Public TV
2 Min Read

– ಇಸ್ರೇಲ್ ಮಾದರಿ ಸೂತ್ರ ಅನುಸರಿಸಲು ಸಿದ್ಧತೆ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ ಹೊಡೆದೋಡಿಸಲು ಕರ್ನಾಟಕ ಹೊಸ ಅಸ್ತ್ರ ರೆಡಿ ಮಾಡುತ್ತಿದೆ.

ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹೊಸ ಸೂತ್ರ ಸಿದ್ಧತೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲೂ ಇಸ್ರೇಲ್ ಮಾದರಿ ಸೂತ್ರ ಅನುಸರಿಸಲು ಸಿದ್ಧತೆ ಮಾಡಲಾಗುತ್ತಿದೆ. ತಜ್ಞ ವೈದ್ಯರ ಸಲಹೆ ಮೇರೆಗೆ ಇಸ್ರೇಲ್ ಮಾದರಿಯಲ್ಲಿ ರಾಜ್ಯದಲ್ಲೂ ಆರೋಗ್ಯ ನೋಂದಾವಣೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವಾಗಿ ಆರೋಗ್ಯ ನೋಂದಾವಣೆ ಬಗ್ಗೆ ಅಧಿಕೃತ ಆದೇಶಕ್ಕೆ ಸರ್ಕಾರ ತಯಾರಿ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಸ್ರೇಲ್ ಮಾದರಿಯಲ್ಲಿ ರಾಜ್ಯದ ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ಧಾರ ಮಾಡಲಾಗಿದ್ದು, ಈ ಮೂಲಕ ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆ ಇಡುತ್ತಿದೆ. ಪ್ರಾಥಮಿಕ ಹಾಗೂ ಪ್ರಾಯೋಗಿಕ ಆರೋಗ್ಯ ನೋಂದಾವಣೆಯನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತವರು ಜಿಲ್ಲೆಯಿಂದಲೇ ಆರಂಭಿಸಲು ಚಿಂತನೆ ನಡೆದಿದೆ. ಅಂದರೆ ಜೂನ್ ಎರಡನೇ ವಾರದಲ್ಲಿ ರಾಜ್ಯದಲ್ಲಿ ಇಸ್ರೆಲ್ ಮಾದರಿಯ ಹೆಲ್ತ್ ನೋಂದಾಣಿ ಆರಂಭವಾಗುವ ಸಾಧ್ಯತೆ ಇದೆ.

ಇಸ್ರೆಲ್ ಮಾದರಿಯ ಆರೋಗ್ಯ ನೋಂದಾವಣೆ ಅಂದರೆ ಏನು ಹೇಗಿರುತ್ತೆ?
* ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರೋಗ್ಯ ಮಾಹಿತಿ ಸಂಗ್ರಹಿಸಿ ನೋಂದಾವಣೆ ಮಾಡುವುದು.
* ವ್ಯಕ್ತಿಯ ಹೆಸರು, ವಯಸ್ಸು ಹಾಗೂ ಅನಾರೋಗ್ಯದ ಸಮಸ್ಯೆ ಇದ್ದರೆ ಅದರ ಮಾಹಿತಿ ನೋಂದಾವಣೆ.
* ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಹೋಗಿ ಈ ಮಾಹಿತಿಯನ್ನ ಸಂಗ್ರಹಿಸುತ್ತಾರೆ.
* ಎಪಿಎಲ್ ಅಥವಾ ಬಿಪಿಎಲ್ ಕಾರ್ಡುದಾರ ಅನ್ನೋ ಮಾಹಿತಿ ಹಾಗೂ ಇದುವರೆಗಿನ ಅನಾರೋಗ್ಯದ ವಿವರ ನಮೂದು
* ಇದುವರೆಗೆ ಪಡೆದಿರುವ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಎಲ್ಲದರ ಮಾಹಿತಿ ನೋಂದಾವಣೆ

* ಹೀಗೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನ ಆರೋಗ್ಯ ಇಲಾಖೆಯಲ್ಲಿ ನೋಂದಾವಣೆ ಮಾಡಲಾಗುತ್ತದೆ.
* ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾದರೆ ಹೆಲ್ತ್ ರಿಜಿಸ್ಟರ್ ಮೂಲಕ ಆ ವ್ಯಕ್ತೀಯ ಸಂಪೂರ್ಣ ಮಾಹಿತಿ ಕ್ಷಣಾರ್ಧದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ಲಭ್ಯವಾಗಲಿದೆ.
* ಅನಾರೋಗ್ಯ ಪೀಡಿತ ವ್ಯಕ್ತಿಯ ಸಂಪೂರ್ಣ ಹೆಲ್ತ್ ರಿಪೋರ್ಟ್ ಸಿಕ್ಕರೆ ಚಿಕಿತ್ಸೆಗೆ ಅನುಕೂಲವಾಗಲಿದೆ.
* ಹೆಲ್ತ್ ರಿಜಿಸ್ಟರ್ ಆದರೆ ಮುಂದಿನ ದಿನಗಳಲ್ಲಿ ಕೋವಿಡ್ ನಂತರ ಯಾವುದೇ ಆರೋಗ್ಯ ಸಮಸ್ಯೆ ಸವಾಲು ಎದುರಾದರೆ ಸೂಕ್ತ ತೀರ್ಮಾನಕ್ಕೆ ಇದು ನೆರವಾಗಲಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಇಸ್ರೆಲ್ ಮಾದರಿಯ ಆರೋಗ್ಯ ನೋಂದಾವಣೆಗೆ ಸಿದ್ಧತೆ ಆರಂಭವಾಗಿದ್ದು, ತಜ್ಞ ವೈದ್ಯರಾದ ಡಾ.ಸಚ್ಚಿದಾನಂದ, ಡಾ.ಗಿರೀಶ್, ಡಾ.ವಿವೇಕ್ ಜವಳಿ, ಡಾ.ಶರಣ್ ಪಾಟೀಲ್ ಮೊದಲಾದ ತಜ್ಞಾರ ಸಮಿತಿಯಿಂದ ಸರ್ಕಾರ ವರದಿ ಸಿದ್ಧಪಡಿಸುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಈ ಪ್ರಯತ್ನಕ್ಕೆ ಸಿಎಂ ಸಹ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ತಜ್ಞರ ತಂಡ ಈಗಾಗಲೇ ಈ ಸಂಬಂಧ ತಮ್ಮ ಅಭಿಪ್ರಾಯವನ್ನ ಸರ್ಕಾರದ ಮುಂದಿಟ್ಟಿದ್ದು, ಸರ್ಕಾರವು ಆಸಕ್ತಿ ವಹಿಸಿ ಇನ್ನಷ್ಟು ಮಾಹಿತಿಯನ್ನ ತಜ್ಞರಿಂದ ಕೇಳಿದೆ. ಎಲ್ಲವು ಸರಿಯಾದರೆ ಮುಂದಿನ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕು ಜೂನ್ ಎರಡನೇ ವಾರದ ನಂತರ ಅಧಿಕೃತವಾಗಿ ಹೆಲ್ತ್ ರಿಜಿಸ್ಟ್ರೇಷನ್ ಆರಂಭವಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *