ಕೊರೊನಾ ಹಿನ್ನೆಲೆ SSLC ಪರೀಕ್ಷೆ ಬೇಕಾ?, ಬೇಡ್ವಾ?- ಎಕ್ಸಾಂ ವಿರುದ್ಧ ಹೆಚ್ಚಿದ ಒತ್ತಡ

Public TV
3 Min Read

– ಪಬ್ಲಿಕ್ ಟಿವಿ ಕ್ಯಾಂಪೇನ್‍ಗೆ ಭಾರೀ ಜನ ಸ್ಪಂದನೆ

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ 3 ತಿಂಗಳಿಂದ ಮುಂದೂಡಿಕೆಯಾಗಿರೋ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನು 15 ದಿನ ಮಾತ್ರ ಬಾಕಿಯಿದೆ. ಇದೇ 25ರಿಂದ ಜುಲೈ 4ರವರೆಗೆ 10ನೇ ಕ್ಲಾಸ್ ಪರೀಕ್ಷೆಗೆ ದಿನಾಂಕ ಫಿಕ್ಸ್ ಆಗಿದೆ. ಸರ್ಕಾರ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಈ ಹೊತ್ತಲ್ಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕಾ.. ಬೇಡ್ವಾ..? ಅನ್ನೋದರ ಬಗ್ಗೆ ವ್ಯಾಪಕ ಚರ್ಚೆ ಆಗ್ತಿದೆ. ಮಕ್ಕಳಿಗೂ ಕೊರೊನಾ ಹಬ್ಬುತ್ತೆ ಅನ್ನೋ ದೊಡ್ಡ ಆತಂಕ ನಂತರದ ಪರಿಣಾಮಗಳ ಭೀತಿ ಪೋಷಕರಲ್ಲಿ ಡಬಲ್ ಆಗಿದೆ.

ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕಾ ಬೇಡ್ವಾ..? ಅನ್ನೋ ಚರ್ಚೆಯನ್ನು ಮೊದಲಿಗೆ ಹುಟ್ಟು ಹಾಕಿದ್ದು ಪಬ್ಲಿಕ್‍ಟಿವಿ. ಯಾಕಂದ್ರೆ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಮತ್ತು ಪುದುಚೆರಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನೇ ರದ್ದು ಮಾಡಿದ್ದಾರೆ. ಇಂಟರ್ನಲ್ ಮಾರ್ಕ್ಸ್ ಆಧರಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡೋದಾಗಿ ರಾಜ್ಯ ಸರ್ಕಾರಗಳು ಹೇಳಿವೆ. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಹತ್ತನೇ ತರಗತಿ ಪರೀಕ್ಷೆ ರದ್ದು ಮಾಡ್ಬೇಕು ಅನ್ನೋ ಅಭಿಯಾನ ಜೋರಾಗಿದೆ.

  ಪರೀಕ್ಷೆ ನಡೆದ್ರೆ ಏನಾಗುತ್ತೆ..?
ಸ್ವಲ್ಪ ಯಾಮಾರಿದ್ರೂ ಮಕ್ಕಳಲ್ಲೂ ಸೋಂಕು ಹರಡುವ ಸಾಧ್ಯತೆ ಇದೆ. ಥರ್ಮಲ್ ಸ್ಕ್ಯಾನಿಂಗ್‍ನಿಂದ ಪರೀಕ್ಷಾ ಕೇಂದ್ರದಲ್ಲಿ ಸೋಂಕು ಪತ್ತೆ ಅಸಾಧ್ಯ. ಕೊರೊನಾ ಆತಂಕದಲ್ಲಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆಯಲು ಆಗದಿರಬಹುದು. ಮಕ್ಕಳ ಮಾನಸಿಕ, ದೈಹಿಕ ಸ್ಥಿತಿ ಮೇಲೆ ಕೊರೊನಾ ಆತಂಕ ಪರಿಣಾಮ ಬೀರಬಹುದು.

ಸರ್ಕಾರದ ವಾದ ಏನು..?:
ಸಾಮೂಹಿಕವಾಗಿ ಪಾಸ್ ಮಾಡಿದ್ರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. 8.5 ಲಕ್ಷ ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ರೆ ಕಾಲೇಜು ಸಮಸ್ಯೆ ಎದುರಾಗಲಿದೆ. ಐಟಿಐ, ಡಿಪ್ಲೋಮಾ ಕೋರ್ಸ್‍ಗಳಿಗೆ ಯಾವ ಆಧಾರದ ಮೇಲೆ ಅಡ್ಮಿಷನ್ ಮಾಡ್ಬೇಕು..?, ಎಸ್‍ಎಸ್‍ಎಲ್‍ಸಿ ಶಿಕ್ಷಣ ಆಧಾರಿತ ಉದ್ಯೋಗದ ಭರ್ತಿ ಹೇಗೆ..?, ಎಲ್ಲಾ ರೀತಿಯ ಮಾನದಂಡಗಳನ್ನು ಸಂಪೂರ್ಣ ಬದಲಿಸಬೇಕಾಗುತ್ತೆ. ಅಲ್ಲದೆ ಮುಂದಿನ ವರ್ಷವೂ ಕೊರೊನಾ ಇದ್ದಲ್ಲಿ ಆಗಲೂ ಪರೀಕ್ಷೆ ರದ್ದು ಮಾಡಬೇಕಾ ಎಂದು ಸರ್ಕಾರ ಪ್ರಶ್ನೆ ಮಾಡುತ್ತಿದೆ.

ಶಿಕ್ಷಣ ಸಚಿವರು ಸ್ಪಷ್ಟನೆ:
ಪಬ್ಲಿಕ್ ಟಿವಿಯ ಮೆಗಾ ಅಭಿಯಾನಕ್ಕೆ ಸ್ಪಂದಿಸಿದ ಸಚಿವ ಸುರೇಶ್ ಕುಮಾರ್ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷೆ ರದ್ದು ಮಾಡಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಸಚಿವರು, ನಾವು ಪರೀಕ್ಷೆ ರದ್ದು ಮಾಡುವ ಸ್ಥಿತಿಯಲ್ಲಿ ಇಲ್ಲ. ಬಹಳ ಮುಂದೆ ಹೋಗಿದ್ದೇವೆ. ಮಕ್ಕಳು-ಶಿಕ್ಷಕರಲ್ಲಿ ಗೊಂದಲ ಸೃಷ್ಟಿ ಬೇಡ ಅಂದಿದ್ದಾರೆ. ಇದೇ ವೇಳೆ ಆಗಸ್ಟ್ ನಂತರ ರಾಜ್ಯದಲ್ಲಿ ಶಾಲೆಗಳು ಓಪನ್ ಅಂತ ಹೇಳಿದ್ದಾರೆ.

ಸರ್ಕಾರ ತೆಗೆದುಕೊಂಡಿರೋ ಕ್ರಮಗಳು ಏನು..?
ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯ (ಸಂಘ ಸಂಸ್ಥೆಗಳ ವತಿಯಿಂದ ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ನೀಡ್ತಿದೆ) ಮಾಡಿದೆ. ಪ್ರತಿ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಪ್ರತಿದಿನ ಜ್ವರ ತಪಾಸಣೆ ನಡೆಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ್ರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ.

ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೊಠಡಿಗಳ ಶುಚೀಕರಣ ಮಾಡಲಾಗುತ್ತದೆ. ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕಂಟೈನ್ಮೆಂಟ್ ಝೋನ್‍ನಲ್ಲಿ ಪರೀಕ್ಷೆ ಕೇಂದ್ರ ರದ್ದು ಮಾಡಲಾಗುತ್ತದೆ. ಕಂಟೈನ್ಮೆಂಟ್ ಝೋನ್‍ನ ಸೋಂಕಿತರಲ್ಲ ವಿದ್ಯಾರ್ಥಿಗಳಿಗೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಅವಕಾಶ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರದ ಶೌಚಾಲಯ ಶುಚಿಯಾಗಿ ಇಟ್ಟುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಕ್ಕಳ ಸಹಾಯಕ್ಕೆ ಸ್ಕೌಟ್ಸ್ ಅಂಡ್ ಗೈಡ್ಸ್, ಸ್ವಯಂ ಸೇವಕರ ನಿಯೋಜನೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಬೆಳಗಾವಿ ಮೂಲದ ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ ಅನ್ನೋವ್ರು ರಾಜ್ಯ ಸರ್ಕಾರದ ವಿರುದ್ಧ ದೂರು ಕೊಟ್ಟಿದ್ದಾರೆ. ಆದರೆ ಪರೀಕ್ಷೆ ರದ್ದು ಮಾಡಬೇಡಿ, ನಡೆಯಲೇಬೇಕು ಅಂತ ಕ್ಯಾಮ್ಸ್ ಹೇಳಿದ್ರೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸದೆ ಇರೋದೇ ಉತ್ತಮ ಅಂತ ಮನೋವಿಜ್ಞಾನಿ ಶ್ರೀಧರ್ ಆಚಾರ್ಯ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *