ಕೊರೊನಾ ಹಿಟ್ ಲಿಸ್ಟ್‌ನಲ್ಲಿ 15 ರಾಜ್ಯ, 67 ಜಿಲ್ಲೆ

Public TV
2 Min Read

– ಮಹಾಮಾರಿ ಪೀಡಿತ ಜಿಲ್ಲೆಗಳಿಗೆ ಕೇಂದ್ರ ಟೀಂ

ನವದೆಹಲಿ: ಭಾರತ ಅನ್‍ಲಾಕ್ ಆಗುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಹದಿನೈದು ರಾಜ್ಯಗಳ ಐವತ್ತಕ್ಕೂ ಹೆಚ್ಚು ಜಿಲ್ಲೆಯಲ್ಲಿ ಅಟ್ಟಹಾಸ ಮೇರೆಯುತ್ತಿದೆ. ಹೀಗೆ ತೀವ್ರಗತಿಯಲ್ಲಿ ಏರುತ್ತಿರುವ ಸೋಂಕಿಗೆ ಬ್ರೇಕ್ ಹಾಕಲು ಖುದ್ದು ಈಗ ಕೇಂದ್ರ ಆರೋಗ್ಯ ಇಲಾಖೆ ಅಖಾಡಕ್ಕೆ ಇಳಿದಿದೆ. ರಾಜ್ಯಗಳಿಗೆ ವಿಶೇಷ ಟೀಂಗಳನ್ನು ಕಳುಹಿಸಲು ಮುಂದಾಗಿದೆ.

ಮೂರನೇ ಅವಧಿಯಲ್ಲಿ ಶುರುವಾದ ಕೊರೊನಾ ಸೋಂಕು ಏರಿಕೆಯ ಪ್ರಮಾಣ ಇನ್ನು ತಗ್ಗಿಲ್ಲ. ಭಾರತ ಅನ್‍ಲಾಕ್ ಆಗುತ್ತಿದ್ದಂತೆ ಕೊರೊನಾ ಸೋಂಕಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಹೀಗೆ ಹೆಚ್ಚಳವಾಗುತ್ತಿರುವ ಸೋಂಕು ದೇಶದಲ್ಲಿ ಸಮುದಾಯಕ್ಕೆ ಹರಡುವ ಭೀತಿ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಐಸಿಎಂಆರ್ ಜೊತೆಗೆ ಅಧ್ಯಯನ ನಡೆಸಿರುವ ಕೇಂದ್ರ ಆರೋಗ್ಯ ಇಲಾಖೆ, ಭಾರತದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ 15 ರಾಜ್ಯಗಳ 67 ಜಿಲ್ಲೆಗಳಲ್ಲಿ ನಗರ ಸಭೆಗಳ ವ್ಯಾಪ್ತಿಯನ್ನು ಪತ್ತೆ ಮಾಡಿದೆ. ಈ ಜಿಲ್ಲೆಗಳಿಗೆ ಕೇಂದ್ರದ ತಂಡ ಭೇಟಿ ನೀಡಲಿದ್ದು, ಕೊರೊನಾಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಿದೆ. ಈ ಟೀಂನಲ್ಲಿ ತಲಾ ಒಬ್ಬರು ಸಾರ್ವಜನಿಕ ಆರೋಗ್ಯ ಅಧಿಕಾರಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಜಂಟಿ ಕಾರ್ಯದರ್ಶಿ ಹುದ್ದೆಯ ನೊಡೇಲ್ ಅಧಿಕಾರಿ ಇರಲಿದ್ದಾರೆ. ಇವರು ಆಯಾ ಜಿಲ್ಲಾಡಳಿತದ ಜೊತೆಗೂಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ.

ಅಂದಹಾಗೆ ಕೇಂದ್ರ ಆರೋಗ್ಯ ಇಲಾಖೆ ಕಳೆದ ಬಾರಿ 80ಕ್ಕೂ ಹೆಚ್ಚು ಜಿಲ್ಲೆಗಳನ್ನು ತನ್ನ ಹಿಟ್ ಲಿಸ್ಟ್‌ನಲ್ಲಿ ಗುರುತಿಸಿತ್ತು. ಆದರೆ ಈ ಬಾರಿ ಈ ಪಟ್ಟಿ ಮತ್ತಷ್ಟು ಪರಿಷ್ಕರಿಸಿ 67 ಜಿಲ್ಲೆಗಳ ನಗರಸಭೆ ಪ್ರದೇಶಗಳನ್ನು ಗುರುತಿಸಿದೆ. ಹಿಟ್ ಲಿಸ್ಟ್‌ನಲ್ಲಿರುವ ರಾಜ್ಯಗಳು ಯಾವುದು? ಯಾವ ರಾಜ್ಯದಲ್ಲಿ ಎಷ್ಟು ಜಿಲ್ಲೆ ಹಿಟ್ ಲಿಸ್ಟ್‌ನಲ್ಲಿದೆ ಅನ್ನೊದು ನೋಡುವುದಾದರೆ:

ಮಹಾರಾಷ್ಟ್ರ 07, ತೆಲಂಗಾಣ 04, ತಮಿಳುನಾಡು 07, ರಾಜಸ್ಥಾನ 05, ಅಸ್ಸಾಂ 06, ಹರಿಯಾಣ 04, ಗುಜರಾತ್ 03, ಕರ್ನಾಟಕ 04, ಉತ್ತರಾಖಂಡ 03, ಮಧ್ಯಪ್ರದೇಶ 05, ಪಶ್ಚಿಮ ಬಂಗಾಳ 03, ದೆಹಲಿ 03, ಬಿಹಾರ 04, ಉತ್ತರ ಪ್ರದೇಶ 04 ಮತ್ತು ಒಡಿಶಾ 05 ಜಿಲ್ಲೆ ಹಿಟ್ ಲಿಸ್ಟ್‌ನಲ್ಲಿದೆ.

ಕರ್ನಾಟಕಕ್ಕೂ ಕೇಂದ್ರದ ಪವರ್ ಫುಲ್ ತಂಡ
ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ರಾಜ್ಯದ ನಾಲ್ಕು ಜಿಲ್ಲೆಗೆ ಕೇಂದ್ರದ ತಂಡ ಬರಲಿದೆ. 947 ಕೇಸ್ ಗಳಿರುವ ಉಡುಪಿ ಜಿಲ್ಲೆ, 769 ಸೋಂಕು ಪತ್ತೆಯಾಗಿರುವ ಕಲಬುರಗಿ, 642 ಪ್ರಕರಣಗಳಿರುವ ಯಾದಗಿರಿ ಹಾಗೂ 533 ಕೇಸ್‍ಗಳಿರುವ ಬೆಂಗಳೂರು ಗ್ರಾಮೀಣ ಭಾಗಕ್ಕೆ ಈ ತಂಡಗಳ ಬರಲಿದೆ.

ಕೇಂದ್ರದಿಂದ ಬರುವ ಈ ತಂಡಗಳ ಕೆಲಸ:
* ರಾಜ್ಯ ಆರೋಗ್ಯ ಇಲಾಖೆ ಜಿಲ್ಲಾಡಳಿತದೊಂದಿಗೆ ಸೇರಿ ಸೋಂಕು ಹಬ್ಬುತ್ತಿರುವ ಬಗ್ಗೆ ಅಧ್ಯಯನ
* ಮುಂದಿನ ಅಪಾಯಗಳನ್ನು ಗುರುತಿಸುವುದು
* ಸೋಂಕು ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳುವುದು
* ಪುರಸಭೆ ಮಟ್ಟದಿಂದ ಕಾರ್ಯಚರಣೆ ಚುರುಕುಗೊಳಿಸುವುದು
* ಸೋಂಕಿನ ತೀವ್ರತೆ ಆಧರಿಸಿ ಸೂಕ್ತ ಆಸ್ಪತ್ರೆ ಬೆಡ್ ಚಿಕಿತ್ಸೆ ವ್ಯವಸ್ಥೆ ಮಾಡುವುದು
* ಕೊರೊನಾ ಹರಡುವಿಕೆ ಮತ್ತು ಸಾವಿನ ಪ್ರಮಾಣ ತಗ್ಗಿಸುವುದು ಕಾರ್ಯ ಮಾಡಲಿದೆ

ಕೇಂದ್ರ ಆರೋಗ್ಯ ಇಲಾಖೆ ಅನ್‍ಲಾಕ್ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದೆ. ಯಾವುದೇ ಕಾರಣಕ್ಕೂ ಸೋಂಕು ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳಲು ಹಿಟ್ ನಗರಗಳ ಮೇಲೆ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *