ಕೊರೊನಾ ಹಬ್ಬಿಸೋ ಹಾಟ್‍ಸ್ಪಾಟ್ ಆಗುತ್ತಾ ಕಾಫಿನಾಡು?- ಪ್ರವಾಸಿಗರಿಂದ ಸ್ಥಳೀಯರಿಗೆ ಆತಂಕ

Public TV
2 Min Read

ಚಿಕ್ಕಮಗಳೂರು: ಪ್ರಸ್ತುತ ಕೊರೊನಾದ ಕಾಲಘಟ್ಟದಲ್ಲಿ ಕಾಫಿನಾಡಿನ ಸೌಂದರ್ಯವೇ ಜಿಲ್ಲೆ ಹಾಗೂ ಜನರಿಗೆ ಮುಳ್ಳಾಗಿದೆಯಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಏಕೆಂದರೆ, ಶನಿವಾರ ಹಾಗೂ ಭಾನುವಾರ ಬಂತೆಂದರೆ ಪ್ರವಾಸಿಗರಿಗೆ ಮೋಜು-ಮಸ್ತಿ, ನಿಸರ್ಗದೊಂದಿಗೆ ಎಂಜಾಯ್ ಮಾಡೋ ದಿನ. ಆದರೆ, ಜಿಲ್ಲೆಯ ಜನರಿಗೆ ಭಯ, ಆತಂಕ.

ರಾಜ್ಯದ ಅತ್ಯಂತ ಎತ್ತರದ ಗಿರಿಶಿಖರ ಎಂಬ ಖ್ಯಾತಿಗೆ ಪಾತ್ರವಾಗಿರೋ ಮುಳ್ಳಯ್ಯನಗಿರಿಯಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳದ ಪ್ರವಾಸಿಗರ ಮೋಜು-ಮಸ್ತಿಯಿಂದ ಪ್ರವಾಸಿಗರ ಜೊತೆ ಸ್ಥಳೀಯರಿಗೂ ಕೊರೊನಾ ಹಬ್ಬುವ ಆತಂಕ ಎದುರಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಬಂದವರು ಮುಖಕ್ಕೆ ಮಾಸ್ಕ್ ಹಾಕ್ತಿಲ್ಲ. ಇನ್ನು ಸಾಮಾಜಿಕ ಅಂತರವನ್ನಂತೂ ಕೇಳೋದೇ ಬೇಡ. ಇದು ಸ್ಥಳಿಯರು ಹಾಗೂ ಬೇಜವಾಬ್ದಾರಿ ಪ್ರವಾಸಿಗರಿಂದ ಉಳಿದ ಪ್ರವಾಸಿಗರಿಗೆ ಭಯ ಹುಟ್ಟಿಸಿದೆ.

ಕೆಲ ಪ್ರವಾಸಿಗರಿಗೆ ಎ ಸಿಮ್ಟೆಮ್ಸ್ ಕೊರೊನಾ ಇರುತ್ತೆ. ಅವರು ನೋಡಲು ಚೆನ್ನಾಗಿ ಇರುತ್ತಾರೆ. ಕೊರೊನಾದ ಯಾವುದೇ ಗುಣ-ಲಕ್ಷಣಗಳು ಇರೋದಿಲ್ಲ. ಅವರಿಂದಲೂ ಕೊರೊನಾ ಹಬ್ಬಬಹುದು ಎಂದು ಸರ್ಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುತ್ತಿದೆ. ಆದರೆ, ಇಲ್ಲಿಗೆ ಬರುತ್ತಿರುವ ಬೇಜವಾಬ್ದಾರಿ ಪ್ರವಾಸಿಗರು ಸರ್ಕಾರದ ಕೂಗು ನಮಗಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ಬರುವ ಪ್ರವಾಸಿಗರಿಗೆ ಒಬ್ಬರಿಂದ ಒಬ್ಬರಿಗೆ ಹರಡಿ ಚೆನ್ನಾಗಿದ್ದೋರು ಕೊರೊನಾಗೆ ತುತ್ತಾಗಬಹುದು. ಅವರವರ ಊರಲ್ಲಿ ಮತ್ತಷ್ಟು ಜನಕ್ಕೆ ಹಬ್ಬಿಸಬಹುದು. ಇದ್ಯಾವುದರ ಬಗ್ಗೆ ಪ್ರವಾಸಿರು ಯೋಚನೆ ಕೂಡ ಮಾಡುತ್ತಿಲ್ಲ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಹೆಣಕಾಡುತ್ತಿದೆ. ಆದರೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರೋ ಪ್ರವಾಸಿಗರು ನಮಗೂ ಸರ್ಕಾರದ ನಿಯಮಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಸರ್ಕಾರದ ನಿಯಾಮವಳಿಗಳನ್ನು ಸಂಪೂರ್ಣ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಸರ್ಕಾರ ಕೂಡ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಲ್ಲ. ಪೊಲೀಸರು ಇಲ್ಲ. ಗ್ರಾಮ ಪಂಚಾಯಿತಿ ಕೂಡ ಯಾರನ್ನು ನೇಮಕ ಮಾಡಿಲ್ಲ. ಇದು ಪ್ರವಾಸಿಗರ ಅಂಧ ದರ್ಬಾರ್ ಗೆ ಕಾರಣವಾಗಿದೆ.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕ್ಯಾಮೆರಾ ಕಂಡಾಗ ಮುಖಕ್ಕೆ ಮಾಸ್ಕ್ ಧರಿಸುವ ಪ್ರವಾಸಿಗರು ಮತ್ತದೇ ತಪ್ಪು ಮಾಡ್ತಿದ್ದಾರೆ. ಪ್ರವಾಸಿಗರೇನೋ ಕಾಫಿನಾಡಿನ ಸೌಂದರ್ಯಕ್ಕೆ ಮಾರು ಹೋಗಿ ವಾವ್, ಸೂಪರ್ ಎಂದು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ ಎಂದು ಅದಕ್ಕೆ ಮಾಡಬೇಕಿರೋದ ಮಾಡುತ್ತಿಲ್ಲ. ಇದು ಜಿಲ್ಲೆಯ ಜನ ಹಾಗೂ ಪ್ರವಾಸಿಗರಿಗೂ ಆತಂಕ ತಂದೊಡ್ಡುತ್ತಿದ್ದು, ಜನ ಕೊರೊನಾ ಹರಡುವ ಆತಂಕದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ, ಸರ್ಕಾರ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳನ್ನು ನೇಮಿಸಿ, ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *