ಕೊರೊನಾ ಹಗರಣ – ಅನುಮಾನ ಮೂಡಿಸುತ್ತಿದೆ ಸರ್ಕಾರದ ನಡೆ

Public TV
3 Min Read

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ 2 ಸಾವಿರ ಕೋಟಿ ರೂ. ಹಗರಣದ ಆರೋಪ ಮಾಡಿದ ಬೆನ್ನಲ್ಲೇ ತಾನು ಹೆಣೆದ ಬಲೆಯಲ್ಲಿ ಬಿಜೆಪಿ ಸರ್ಕಾರ ಸಿಲುಕಿಕೊಳ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಈ ಪ್ರಶ್ನೆ ಏಳಲು ಕಾರಣ ಸರ್ಕಾರದ ಅನುಮಾನದ ನಡೆ. ಯಾಕಂದ್ರೆ, ಕೊರೊನಾ ವೈದ್ಯಕೀಯ ಸಲಕರಣೆಗಳ ಖರೀದಿ ಆರೋಪ ಕೇಳಿ ಬಂದ ದಿನದಿಂದಲೂ ಸರ್ಕಾರದ ಪ್ರತಿಯೊಂದು ನಡೆಯೂ ಅನುಮಾನ ಮೂಡಿಸುವಂತೆ ಇದೆ.

ಯಾಕೆ ಅನುಮಾನ?
ಆರಂಭದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನಿಖೆಯನ್ನು ಸರ್ಕಾರ ತಡೆದಿತ್ತು. ಬಳಿಕ – ಆಸ್ಪತ್ರೆಗಳ ಪರಿಶೀಲನೆಗೆ ಮುಂದಾದಾಗ ಅದನ್ನು ತಡೆದಿತ್ತು. ಸಿದ್ದರಾಮಯ್ಯ ಹಗರಣ ಆರೋಪ ಮಾಡಿ ಪತ್ರ ಬರೆದಾಗ 17 ದಿನಗಳ ಕಾಲ ಪ್ರತಿಕ್ರಿಯೆ ನೀಡಿರಲಿಲ್ಲ. ಯಾರಿಗೂ ಕೊರೊನಾ ಕುರಿತ ಮಾಹಿತಿ ನೀಡದಂತೆ ಆರೋಗ್ಯ ಇಲಾಖೆಗೆ ಸೂಚಿಸಿತ್ತು. ದಾದ ಬಳಿಕ ಹಗರಣದ ಆರೋಪದ ಯಾವುದೇ ಪ್ರಶ್ನೆಗಳಿಗೂ ನಿಖರ ಮಾಹಿತಿ, ದಾಖಲೆ ನೀಡದೇ ಇರುವ ಕಾರಣ ಸರ್ಕಾರದ ನಡೆ ಅನುಮಾನ ಮೂಡಿಸುವಂತಿದೆ.

ಮತ್ತೆ ಕೆಣಕಿದ ಸಿದ್ದರಾಮಯ್ಯ
ನಿನ್ನೆ 2000 ಕೋಟಿ ಹಗರಣ ಆರೋಪ ಮಾಡಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಕೂಡ ಬಿಜೆಪಿ ಸರ್ಕಾರವನ್ನು ಕೆಣಕಿದ್ದಾರೆ. ವೈದ್ಯಕೀಯ ಉಪಕರಣಗಳ ಖರೀದಿಯೆಲ್ಲವೂ ಪಾರದರ್ಶಕವಾಗಿದ್ದರೆ, ನ್ಯಾಯಾಂಗ ತನಿಖೆಗೆ ಭಯವೇಕೆ ಅಂತ ಚಿವುಟಿದ್ದಾರೆ. ಇವತ್ತು ಮತ್ತೊಮ್ಮೆ ಸುದ್ದಿಗೋಷ್ಠಿ ಮಾಡುವ ಜೊತೆಗೆ, 15ಕ್ಕೂ ಹೆಚ್ಚು ಟ್ವೀಟ್‍ಗಳ ಮೂಲಕ ಬಿಜೆಪಿ ಸರ್ಕಾರವನ್ನು ಕಾಡಿದ್ದಾರೆ. ಆದ್ರೆ, ಹಗರಣದ ತನಿಖೆಗೆ ಸಿದ್ದರಾಮಯ್ಯ ಬಿಗಿಪಟ್ಟು ಹಿಡಿದಿದ್ದರೂ, ಬಿಜೆಪಿ ಸಚಿವರು ಮಾತ್ರ ತುಟಿ ಬಿಚ್ಚಿಲ್ಲ.

ನ್ಯಾಯಾಂಗ ತನಿಖೆ ನಡೆಸುವುದನ್ನು ಬಿಟ್ಟು ಉಳಿದೆಲ್ಲದರ ಮಾತನಾಡಿದ್ದಾರೆ. ನಿನ್ನೆ ವೀರಾವೇಶದ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಒಂದು ಹೆಜ್ಜೆ ಹಿಂದೆ ಇಟ್ಟಂತೆ ಕಾಣುತ್ತಿದೆ. ತನಿಖೆ ನಡೆಸುವಂತೆ ಸಿದ್ದರಾಮಯ್ಯ ನಮಗೆ ಸೂಚನೆ ಕೊಡುವ ಅಧಿಕಾರ ಹೊಂದಿಲ್ಲ. 2019ರ ವೆಂಟಿರೇಟರ್ ಖರೀದಿಯ ತನಿಖೆ ಬಗ್ಗೆ ನಾವ್ ತೀರ್ಮಾನ ಮಾಡ್ತೀವಿ. ಸಿದ್ದರಾಮಯ್ಯ ಹೇಳಿದ್ರು ಅಂತ ತನಿಖೆ ಮಾಡುವುದಿಲ್ಲ ಎಂದಿದ್ದಾರೆ.

ಇನ್ನೊಂದೆಡೆ ಡಿಸಿಎಂ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿದರಾದರೂ, ತನಿಖೆ ಬಗ್ಗೆ ಮಾತನಾಡಲಿಲ್ಲ. ಸಿದ್ದರಾಮಯ್ಯ ಹೇಳಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 500 ಕೋಟಿ ಅಕ್ರಮವಾಗಿಲ್ಲ. ನನ್ನ ಇಲಾಖೆಯಲ್ಲಿ 5 ಕೋಟಿಯೂ ಖರ್ಚಾಗಿಲ್ಲ. ಹೀಗಾಗಿ ಸುಳ್ಳಿಗೆ ತನಿಖೆ ಬೇಕಾ ಅಂತ ಪ್ರಶ್ನಿಸಿದರು.

ಈ ಮಧ್ಯೆ, ಸರಣಿ ಪ್ರಶ್ನೆಗಳ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಪಂಚ ಸಚಿವರಿಗೆ ಪಂಚ ಪ್ರಶ್ನೆ ಕೇಳಿದ್ದಾರೆ. ಆದರೆ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಯಡಿಯೂರಪ್ಪ ಕ್ಯಾಬಿನೆಟ್ ಸಚಿವರು ಯಾರು ತುಟಿಬಿಚ್ಚಿಲ್ಲ. ತಪ್ಪೇ ಮಾಡಿಲ್ಲ ಎಂದಾದರೆ ತನಿಖೆಗೆ ಭಯ ಏಕೆ? ಅನ್ನೋದು ಇಲ್ಲಿ ಪ್ರಶ್ನೆ. ಜೊತೆಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಐವರು ಸಚಿವರ ಪೈಕಿ ನಾಲ್ವರು ಇಂದು ಎಲ್ಲೂ ಕಾಣಿಸಿಕೊಳ್ಳಲಿಲ್ಲ.

ಸರ್ಕಾರಕ್ಕೆ ಸಿದ್ದು ಪಂಚಪ್ರಶ್ನೆ..
ಪ್ರಶ್ನೆ 1 > ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ?
ಪ್ರಶ್ನೆ 2 > ಸರ್ಕಾರ ಅಕ್ರಮ ಮಾಡಿಲ್ಲ, ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ?
ಪ್ರಶ್ನೆ 3 > ವೆಂಟಿಲೇಟರ್‌ಗಳನ್ನು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಖರೀದಿಸಿದ್ದು ಸುಳ್ಳಾ?
ಪ್ರಶ್ನೆ 4 > ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಖರೀದಿ ಬಗ್ಗೆ ತನಿಖೆ ನಡೆಸಬಹುದಲ್ಲವೇ?
ಪ್ರಶ್ನೆ 5 > ಬಿಬಿಎಂಪಿ ಆಯುಕ್ತರ ಏಕಾಏಕಿ ವರ್ಗಾವಣೆ ಯಾಕಾಯ್ತು? ಯಾರ ಭ್ರಷ್ಟಾಚಾರ ಮುಚ್ಚಿಡಲು ಅವರನ್ನು ಬಲಿ ಕೊಟ್ಟಿರಿ?

Share This Article
Leave a Comment

Leave a Reply

Your email address will not be published. Required fields are marked *