ಕೊರೊನಾ ಸೋಂಕಿತೆಯ ಪತಿಯೊಂದಿಗೆ ಸಂಪರ್ಕ: ಹೊಲದಲ್ಲೆ ಕೂಲಿ ಕಾರ್ಮಿಕರಿಬ್ಬರು ಕ್ವಾರಂಟೈನ್

Public TV
1 Min Read

ಚಾಮರಾಜನಗರ: ಕೊರೊನಾ ಸೋಂಕಿತೆಯ ಸಂಪರ್ಕದಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರು ಜಮೀನಿನ ಗುಡಿಸಲಿನಲ್ಲೇ ಕ್ವಾರಂಟೈನ್ ಆಗಿರುವ ಸಂಗತಿ ಚಾಮರಾಜನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರ ಹುಂಡಿಯ ಮಹಿಳೆಯೊಬ್ಬರಿಗೆ ಮೂರು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಇವರ ತೋಟದ ಮನೆಗೆ ಗಾರೆ ಕೆಲಸಕ್ಕೆಂದು ಗ್ರಾಮದ ಇಬ್ಬರು ಕೂಲಿ ಕಾರ್ಮಿಕರು ಹೋಗಿದ್ದರು. ಇದೇ ವೇಳೆ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಕುಟುಂಬದಿಂದ ದೂರವಿರಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಇಬ್ಬರು ಗಾರೆ ಕೆಲಸಗಾರರು ಹೊಲದ ಕಾವಲಿಗೆ ಹಾಕಲಾಗಿರುವ ಗುಡಿಸಲಿನಲ್ಲೇ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಇವರಿಬ್ಬರು ಗಾರೆ ಕಾರ್ಮಿಕರು ಸೋಂಕಿತ ಮಹಿಳೆಯ ನೇರ ಸಂಪರ್ಕಕ್ಕೆ ಬಂದಿಲ್ಲ. ಆದರೆ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತಿಯ ಜೊತೆ ಇವರು ಬೆರೆತಿದ್ದರು. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಕಾರ್ಮಿಕರು ತಮ್ಮ ಶೇಂಗಾ ಹೊಲದಲ್ಲಿ ಕಾವಲು ಕಾಯಲು ಹಾಕಿರುವ ಗುಡಿಸಲಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಇವರ ಸಂಬಂಧಿಕರು ದೂರದಿಂದಲೇ ಇವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಸೋಂಕಿತ ಮಹಿಳೆಗೆ ಸೇರಿದ ಹೊಲಕ್ಕೆ ಕೃಷಿ ಕೆಲಸಕ್ಕೆಂದು ಹೋಗಿದ್ದ ಇತರ ಮೂವರು ಮಹಿಳೆಯರು ಸಹ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಈ ಮೂವರು ಮಹಿಳೆಯರು ಸಹ ಒಂದೇ ಮನೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ನಮ್ಮ ಗ್ರಾಮದಲ್ಲಿ ಕ್ವಾರಂಟೈನ್‍ಗೆ ಒಳಗಾಗಿರುವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಯಾವ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕ್ವಾರಂಟೈನ್‍ನಲ್ಲಿ ಇರುವವರಿಗೆ ಅವರ ಸಂಬಂಧಿಕರು ಆತಂಕದಿಂದಲೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಸೋಂಕಿತ ಮಹಿಳೆಯ ಪತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಕ್ರಿಯರಾಗಿದ್ದು, ಗ್ರಾಮಸ್ಥರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಗ್ರಾಮಸ್ಥರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಇಬ್ಬರು ಗಾರೆ ಕೆಲಸಗಾರರು ಹಾಗೂ ಮೂವರು ಮಹಿಳಾ ಕಾರ್ಮಿಕರು ಕ್ವಾರಂಟೈನ್ ಆಗಿದ್ದರೆ, ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಕೆಯ ಪತಿ ಯಾವುದೇ ಮುಂಜಾಗ್ರತೆ ವಹಿಸಿದೆ ಊರ ತುಂಬೆಲ್ಲ ಓಡಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *