ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರಿದಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಹೆಲ್ತ್ ವಾರಿಯರ್ಸ್ ಮೇಲಿನ ಒತ್ತಡ ಮತ್ತಷ್ಟು ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ತಜ್ಞರು ಸರ್ಕಾರಕ್ಕೆ ಹೊಸ ಸಲಹೆ ನೀಡಿದ್ದು, ಕೋವಿಡ್ ಲಕ್ಷಣಗಳಿರುವ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಶಿಫಾರಸ್ಸು ಮಾಡಿದ್ದಾರೆ.
ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ತಜ್ಞರಿಂದ ಸರ್ಕಾರಕ್ಕೆ ಮತ್ತೊಂದು ವರದಿ ನೀಡಲಾಗಿದ್ದು, ಈ ವರದಿಯಲ್ಲಿ ನೀಡಿರುವ ಶಿಫಾರಸುಗಳನ್ನು ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ವರದಿಗೆ ಅಧಿಕಾರಿಗಳು ಸಮ್ಮತಿ ಸೂಚಿಸಿದರೆ ಸೆಪ್ಟೆಂಬರ್ ನಿಂದ ಜಾರಿ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ.
ಕೋವಿಡ್ ಆಸ್ಪತ್ರೆಗಳು ಮತ್ತು ಕೊರೊನಾ ವಾರಿಯರ್ಸ್ ಮೇಲೆ ಒತ್ತಡ ಕಡಿಮೆ ನೀಡಲು ತಜ್ಞರು ಸಲಹೆ ನೀಡಿದ್ದು, ವರದಿ ಜಾರಿಯಾದರೆ ಮನೆಗಳೇ ಆಸ್ಪತ್ರೆಗಳಾಗಲಿವೆ. ಕೊರೊನಾ ಲಕ್ಷಣ ಇರುವವರಿಗೆ ಮನೆಯಲ್ಲೇ ಟೆಸ್ಟಿಂಗ್ ಮತ್ತು ಪಾಸಿಟಿವ್ ಬಂದರೆ ಚಿಕಿತ್ಸೆ ನೀಡುವುದು. ಎಲ್ಲಾ ರೀತಿಯ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆ ಕೈಬಿಡಬೇಕು. ಗಂಭೀರ ಸಮಸ್ಯೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲು ಮಾಡಬೇಕು.
ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಜ್ವರ, ಕೆಮ್ಮು, ನೆಗಡಿ ಇರುವವರ ಮಾಹಿತಿ ಪಡೆಯಬೇಕು. ಈ ಲಕ್ಷಣಗಳಿರುವವರನ್ನು ಮನೆಯಲ್ಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಮನೆಗಳಲ್ಲೇ ಐಸೋಲೇಷನ್ ಮಾಡಿ ಔಷಧೋಪಚಾರದ ವ್ಯವಸ್ಥೆ ಮಾಡಬೇಕು. ಐಎಲ್‍ಐ ಮತ್ತು ಸಾರಿ ಪ್ರಕರಣಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಕೊರೊನಾ ಟೆಸ್ಟಿಂಗ್ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸೋಂಕಿನ ಪ್ರಮಾಣ ದುಪ್ಪಟ್ಟಾಗುವ ಮುನ್ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ನಲ್ಲಿ ಹೆಚ್ಚಳವಾಗುವ ಕೊರೊನಾ ಪ್ರಕರಣಗಳನ್ನು ನಿಭಾಯಿಸಲು ತಜ್ಞರ ವರದಿ ಸಲ್ಲಿಕೆಯಾಗಿದೆ.