ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂಡಬಿದಿರೆ ಶಿಕ್ಷಕಿ ನಿಧನ

Public TV
2 Min Read

– ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ವಿದ್ಯಾರ್ಥಿನಿ

ಬೆಂಗಳೂರು/ಮಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂಡಬಿದರೆಯ ಶಿಕ್ಷಕಿ ಪದ್ಮಾಕ್ಷಿ ಮೃತಪಟ್ಟಿದ್ದಾರೆ.

ಈ ಸಂಬಂಧ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮೂಡಬಿದರೆಯ ಶಿಕ್ಷಕಿ ಪದ್ಮಾಕ್ಷಿ ಅವರು ಮೃತಪಟ್ಟರೆಂದು ತಿಳಿದು ತುಂಬಾ ವೇದನೆಯೆನಿಸಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸಲು ಶಕ್ತಿ ಸಿಗಲಿ. ಐಶ್ವರ್ಯ ಜೈನ್ ತನ್ನ ತಾಯಿ ಮನೆಗೆ ಹಿಂದಿರುಗಿ ಎಲ್ಲರಂತಾಗುತ್ತಾರೆಂಬ ಕನಸನ್ನು ಹೊತ್ತಿದ್ದಳು. ಈ ಆಘಾತದಿಂದ ಆಕೆ ಚೇತರಿಸಿಕೊಳ್ಳುವಂತಾಗಲಿ ಎಂದು ಬರೆದುಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಚಿವರಿಗೆ ಪತ್ರ ಬರೆದಿದ್ದ ಐಶ್ವರ್ಯ:
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಶಿರ್ತಾಡಿಯ ಮಕ್ಕಿಯ ಡಿಜೆ ಹೈಯರ್ ಪ್ರೈಮರಿ ಏಡೆಡ್ ಸ್ಕೂಲ್ ಮತ್ತು ಮೂಡಬಿದ್ರೆಯ ಜವಹರಲಾಲ್ ನೆಹರೂ ಅನುದಾನಿತ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಶಶಿಕಾಂತ್ ವೈ ಮತ್ತು ಪದ್ಮಾಕ್ಷಿ ಎನ್ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಯ ಪುತ್ರಿ ಐಶ್ವರ್ಯಾ ಜೈನ್ ಸಚಿವರಿಗೆ ಪತ್ರವನ್ನು ಬರೆದಿದ್ದಳು.

ನನ್ನ ಹೆತ್ತವರಿಬ್ಬರೂ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದೀಗ ತಂದೆ ಮತ್ತು ತಾಯಿ ಇಬ್ಬರೂ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಈ ನಡುವೆ ತಾಯಿಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29ರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯೂ ಸೋಂಕಿನಿಂದ ಬಳಲುತ್ತಿದ್ದು ಇದೀಗ ಆಸ್ಪತ್ರೆಯ ಬಿಲ್ ಕಟ್ಟಲು ಸಾಧ್ಯವಾಗದೆ ಒದ್ದಾಡುತ್ತಿದ್ದೇವೆ.

ನಮಗೊಂದು ಸಹಾಯದ ಹಸ್ತ ಬೇಕಿದೆ. ನನ್ನ ತಾಯಿಯು ಈ ವಿದ್ಯಾಗಮ ಯೋಜನೆಯ ಮುಂಚೆ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ತಮ್ಮ ಯೋಜನೆಯೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ತಮ್ಮಿಂದ ಆರ್ಥಿಕ ಸಹಾಯವನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಸರ್ಕಾರವು ಶಿಕ್ಷಕರನ್ನು ಕೈಬಿಡುವುದಿಲ್ಲ ಎಂದು ನಂಬಿದ್ದೇವೆ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಳು.

ಕಣ್ಣೀರಿಗೆ ಮಿಡಿದಿದ್ದ ಸಚಿವರ ಮನ:
ಶಿಕ್ಷಕ ದಂಪತಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವರದಿಗಳನ್ನು ಗಮನಿಸಿದ ತಕ್ಷಣವೇ ಸಚಿವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಅಲ್ಲದೆ ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಸರ್ಕಾರದ ಸೂಚನೆಯಂತೆ ಶಿಕ್ಷಕಿ ಪದ್ಮಾಕ್ಷಿಯವರ ಪುತ್ರಿ ಐಶ್ವರ್ಯಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಂಪರ್ಕಿಸಿದ್ದಾರೆ. ತಮ್ಮ ತಾಯಿಯ ಚಿಕಿತ್ಸೆ ಕುರಿತು ಸರ್ಕಾರ ಪೂರ್ಣ ಕಾಳಜಿ ವಹಿಸಲಿದ್ದು, ಯಾವುದೇ ಆತಂಕ ಬೇಡ ಎಂದು ಸಾಂತ್ವನ ಹೇಳಿದ್ದಾರೆ ಎಂದು ಅವರು ತಿಳಿಸಿದ್ದರು.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಶಿಕ್ಷಕಿಯ ಚಿಕಿತ್ಸೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿರುವ ದ.ಕ. ಜಿಲ್ಲಾಧಿಕಾರಿಯವರು ರೋಗಿಯ ಕಡೆಯಿಂದ ಯಾವುದೇ ರೀತಿಯ ಹಣ ಪಡೆಯದೇ ಚಿಕಿತ್ಸೆ ನೀಡಲು ಸೂಚಿಸಿದ್ದು, ಚಿಕಿತ್ಸಾ ಬಿಲ್ ಅನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆಂದು ಸಚಿವರು ಹೇಳಿದ್ದರು. ಆದರೆ ಇದೀಗ ಶಿಕ್ಷಕಿ ಮೃತಪಟಿರುವ ಸುದ್ದಿ ಕೇಳಿ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *