ಕೊರೊನಾ ವ್ಯಾಕ್ಸಿನ್ ಪಡೆಯೋಕೆ ವಾರಿಯರ್ಸ್ ಹಿಂದೇಟು

Public TV
2 Min Read

ಬೆಂಗಳೂರು: ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿರೋ ‘ಚೀನಿ ವೈರಸ್’ ಕೊರೊನಾಗೆ ಇಷ್ಟು ದಿನ ವ್ಯಾಕ್ಸಿನ್ ಬಂದ್ರೆ ಸಾಕಪ್ಪಾ ಅಂತ ಜನ ಕಾಯುತ್ತಿದ್ದರು. ಆದ್ರೆ ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆಯ ಮಹಾಯಜ್ಞಕ್ಕೆ ಚಾಲನೆ ಸಿಕ್ಕು ನಾಲ್ಕನೇ ದಿನ ಆದರೂ ಟಾರ್ಗೆಟ್ ರೀಚ್ ಆಗೋಕೆ ಒದ್ದಾಡುವಂತಾಗಿದೆ. ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

ರಾಜ್ಯವೂ ಸೇರಿದಂತೆ ದೇಶಾದ್ಯಂತ ಮೊದಲ ಹಂತದ ಕೊರೋನಾ ವಾರಿಯರ್ಸ್ ವ್ಯಾಕ್ಸಿನೇಷನ್‍ಗೆ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗ್ತಿಲ್ಲ. ದೇಶಾದ್ಯಂತ 3 ದಿನದಲ್ಲಿ 4,54,049 ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗಿದೆ. 580 ಜನರಲ್ಲಿ ಅಡ್ಡಪರಿಣಾಮವಾಗಿದ್ದು, 7 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇವತ್ತು 32,205 ಗುರಿ ಪೈಕಿ 15,223 ಹೆಲ್ತ್ ವರ್ಕರ್ಸ್ ಗೆ ಲಸಿಕೆ ನೀಡಲಾಗಿದೆ. ಹೀಗಾಗಿ 4 ದಿನದಲ್ಲಿ ಒಟ್ಟು 70,723 ಮಂದಿಗೆ ಲಸಿಕೆ ಚುಚ್ಚುಮದ್ದು ನೀಡಲಾಗಿದೆ. ಆದರೆ 1,08,922 ಲಕ್ಷ ಗುರಿ ರೀಚ್ ಕಷ್ಟವಾಗ್ತಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರೋ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಸಹಜ. ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆ ವಿತರಣೆ ಆಗಿದೆ ಆಗಿದೆ ಅಂತ ಹೇಳಿದ್ದಾರೆ.

3 ದಿನಗಳಿಂದ ಟಾರ್ಗೆಟ್ ರೀಚ್ ಆಗದ ಕಾರಣ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಟಾರ್ಗೆಟ್ ತಲುಪಲು, ತಜ್ಞರು 2 ತಿಂಗಳ ಡೆಡ್‍ಲೈನ್ ಸಲಹೆ ನೀಡಿದ್ದಾರೆ. 2ನೇ ಅಲೆಯ ಹೆಚ್ಚಾಗೋಕೆ ಮುನ್ನ ದೇಶದ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ಕೊಡೋದು ಕ್ಷೇಮ ಅಂದಿದ್ದಾರೆ.

ಲಸಿಕೆ ಟಾರ್ಗೆಟ್ ರೀಚ್ ಆಗ್ತಿಲ್ಲ ಯಾಕೆ?: ವ್ಯಾಕ್ಸಿನ್ ಬಗ್ಗೆ ಸರಿಯಾದ ಜಾಗೃತಿ ಮೂಡಿಸಿಲ್ಲ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಕ್ಸಿನ್ ಬಗ್ಗೆ ಭಯ ಹುಟ್ಟಿಸೋ ವಿಡಿಯೋ, ಮೆಸೇಜ್‍ಗಳ ಹರಿದಾಡುತ್ತಿವೆ ಎನ್ನಲಾಗಿದೆ. ಲಸಿಕೆಯಿಂದ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಸಹಜ ಭಯ ಜನರಲ್ಲಿ ಕಾಡುತ್ತಿದೆ. ವ್ಯಾಕ್ಸಿನ್‍ನಿಂದ ಎಡವಟ್ಟಾದ್ರೆ ಲಸಿಕೆ ಕಂಪನಿಗಳೇ ಹೊಣೆ ಅಂತ ಕೇಂದ್ರ ಹೇಳಿರೋದು ಮತ್ತಷ್ಟು ಭಯ ಹುಟ್ಟಿಸಿದೆ. ಕೋವ್ಯಾಕ್ಸಿನ್ 3ನೇ ಕ್ಲಿನಿಕಲ್ ಟ್ರಯಲ್ ಮುಗಿಸದಿದ್ದರೂ ಪ್ರಯೋಗಕ್ಕೆ ಅವಕಾಶ ನೀಡಿರೋದು ಸಹ ಒಂದು ಕಾರಣ.

ವ್ಯಾಕ್ಸಿನ್ ಇಂಜೆಕ್ಷನ್ ನಂತರ ಧೂಮಪಾನ, ಮದ್ಯಪಾನ ಮಾಡಬಾರದು ಎಂಬ ತಜ್ಞರ ಹೇಳಿಕೆಗಳಿಂದ ಇವರೆಡರ ಚಟಕ್ಕೆ ದಾಸರಾಗಿರುವ ಜನರು ಲಸಿಕೆಗೆ ಮುಂದೆ ಬರುತ್ತಿಲ್ಲ. ನೋಂದಣಿ ಮಾಡಿಸಿಕೊಂಡವರಿಗೆ ವ್ಯಾಕ್ಸಿನೇಷನ್ ಕಡ್ಡಾಯ ಮಾಡದಿರೋದು.

ಸರ್ಕಾರದ ಮುಂದಿನ ಆಯ್ಕೆ ಏನು?: ಲಸಿಕಾ ಅಭಿಯಾನದ ಬಗ್ಗೆ ವ್ಯಾಪಕವಾಗಿ ಪ್ರಚಾರದ ಅಗತ್ಯವಿದೆ. ವ್ಯಾಕ್ಸಿನ್ ತೆಗೆದುಕೊಂಡು ಖ್ಯಾತ ವೈದ್ಯರನ್ನ ಮುಂದಿಟ್ಟು, ಆರೋಗ್ಯ ಕಾರ್ಯಕರ್ತರಿಗೆ ಹುರಿದುಂಬಿಸಬೇಕು. ಕೆಲ ಸಿಬ್ಬಂದಿ ತಪ್ಪಾಗಿ ಮೊಬೈಲ್ ನಂಬರ್ ನಮೂದಿಸಿದ್ದು, ತುರ್ತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ವ್ಯಾಕ್ಸಿನ್ ಪಡೆಯಲು ಸಿಬ್ಬಂದಿ ಹಿಂದೇಟೇಕೆ ಅಂತ ಪತ್ತೆ ಹಚ್ಚಿ, ಮನವೊಲಿಸಬೇಕು.

Share This Article
Leave a Comment

Leave a Reply

Your email address will not be published. Required fields are marked *