ಕೊರೊನಾ ವೈರಸ್‌ ಪತ್ತೆ ಹಚ್ಚಲಿವೆ ನಾಯಿಗಳು – ಪ್ರಯೋಗದಲ್ಲಿದ್ದಾರೆ ವಿಜ್ಞಾನಿಗಳು

Public TV
2 Min Read

– ಯಶಸ್ವಿಯಾದರೆ ಕಡಿಮೆ ಖರ್ಚಿನಲ್ಲಿ ನಡೆಯಲಿದೆ ಪರೀಕ್ಷೆ
– ವಿಜ್ಞಾನ ಪತ್ರಿಕೆ ನೇಚರ್‌ನಲ್ಲಿ ವಿಶೇಷ ವರದಿ ಪ್ರಕಟ

ಲಂಡನ್‌: ಕಳ್ಳರನ್ನು, ಬಾಂಬ್‌ಗಳನ್ನು ನಾಯಿಗಳು ಪತ್ತೆ ಮಾಡುವುದು ಹಳೆ ಸುದ್ದಿ. ಆದರೆ  ಇನ್ನು ಮುಂದೆ ವಿಶ್ವವನ್ನೇ ಲಾಕ್‌ ಮಾಡಿ ತೊಂದರೆ ಕೊಡುತ್ತಿರುವ ಕಣ್ಣಿಗೆ ಕಾಣಿಸದ ಕೊರೊನಾ ವೈರಸನ್ನೂ ಪತ್ತೆ ಹಚ್ಚಿದರೆ ಅಚ್ಚರಿ ಇಲ್ಲ.

ಈಗಾಗಲೇ ಕೆಲ ಪ್ರಾಣಿ ತಜ್ಞರು ಈ ವಿಚಾರದಲ್ಲಿ ಸಂಶೋಧನೆಗೆ ತೊಡಗಿದ್ದಾರೆ. ತರಬೇತಿ ನೀಡಿದರೆ ನಾಯಿಗಳು ತಮ್ಮ ಮೂಗಿನಿಂದಲೇ ಕೊರೊನಾ ವೈರಸ್‌ ಪತ್ತೆ ಹಚ್ಚಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಸಿದ್ಧ ನೇಚರ್‌ ಪತ್ರಿಕೆ ವರದಿ ಮಾಡಿದೆ.

ಪಶು ವೈದ್ಯ ಮತ್ತು ನರ ವಿಜ್ಞಾನಿ ಹೊಲ್ಗರ್ ವೋಲ್ಕ್, ಸರಿಯಾಗಿ ತರಬೇತಿ ನೀಡಿದರೆ ಕರೋನವೈರಸ್ ಅನ್ನು ನಾಯಿಗಳು ಪತ್ತೆಹಚ್ಚಬಹುದು ಎಂದು ವಿಶ್ವಾಸದಿಂದ ಹೇಳಿದ್ದಾರೆ. ಈಗಾಗಲೇ ಇವರು ವೈರಸ್‌ ಪತ್ತೆ ಹಚ್ಚುವ ಸಂಬಂಧ ನಾಯಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ಕೊರೊನಾ ವೈರಸ್‌ ಆರಂಭದಲ್ಲಿ ಅಮೆರಿಕ, ಯುಎಇ, ಫಿನ್‌ಲ್ಯಾಂಡ್‌, ಲೆಬನಾನ್‌ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಬೆವರಿನಲ್ಲಿ ಕೋವಿಡ್‌ 19  ವೈರಸ್‌ ಪತ್ತೆ ಹಚ್ಚಲು ಪ್ರಯೋಗಿಕವಾಗಿ ಸ್ನಿಫರ್‌ ನಾಯಿಗಳನ್ನು ಬಳಸಲಾಗಿತ್ತು.

ಲೆಬನಾನ್‌ ಮತ್ತು ಫಿನ್‌ಲ್ಯಾಂಡ್‌ನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸ್ನಿಫರ್‌ ನಾಯಿಗಳು ಕೊರೊನಾ ವೈರಸ್‌ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು ಎಂದು ವರದಿಯಾಗಿದೆ.

ಮಾಹಿತಿಗಳ ಪ್ರಕಾರ ಲೆಬನಾನ್‌ನಲ್ಲಿ 1,680 ಪ್ರಯಾಣಿಕರನ್ನು ನಾಯಿಗಳು ಪರೀಕ್ಷೆ ಮಾಡಿ 158 ಮಂದಿಗೆ ಸೋಂಕು ಇದೆ ತಿಳಿಸಿತ್ತು. ಬಳಿಕ ಇವರ ಗಂಟಲ ಮಾದರಿಯನ್ನು ತೆಗೆದು ಪಿಸಿಆರ್‌ ಪರೀಕ್ಷೆ ಮಾಡಿದಾಗಲೂ ಸೋಂಕು ಇರುವುದು ದೃಢಪಟ್ಟಿತ್ತು.

ಇದು ತುಂಬಾ ನಿಖರ, ಕಾರ್ಯಸಾಧ್ಯ, ಅಗ್ಗ ಎಂದು ಲೆಬನಾನ್‌ ಬೈರುತ್‌ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಶಸ್ತ್ರ ಚಿಕಿತ್ಸಕ ಮತ್ತು ಸಂಶೋಧಕ ರಿಯಾದ್ ಸರ್ಕಿಸ್ ಹೇಳಿದ್ದಾರೆ ಎಂದು ನೇಚರ್‌ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಕ್ಯಾನ್ಸರ್ ಮತ್ತು ಮಲೇರಿಯಾವನ್ನು ಪತ್ತೆಹಚ್ಚಲು ವಿಜ್ಞಾನಿಗಳು ನಾಯಿಗಳಿಗೆ ತರಬೇತಿ ನೀಡಿದ್ದರು.

ಈಗ ಯಾಕೆ?
ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗವಾಗಿದ್ದು ಕೂಡಲೇ ನಿಖರ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಆಂಟಿಜನ್‌, ಆರ್‌ಟಿ ಪಿಸಿಆರ್‌ ಇತ್ಯಾದಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಪರೀಕ್ಷೆ ಸಮಯದ ಜೊತೆ ಕಿಟ್‌ಗಳಿಗೂ ಖರ್ಚು ಇದೆ. ಈ ಕಾರಣಕ್ಕೆ ನಾಯಿಗಳ ಮೂಲಕ ಕೊರೊನಾ ವೈರಸ್‌ ಪತ್ತೆ ಹಚ್ಚಲು ವಿಜ್ಞಾನಿಗಳು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *