ಕೊರೊನಾ ವಿರುದ್ಧ ಅಸಹಕಾರ ಚಳುವಳಿ ನಡೆಸಿ- ಸುರೇಶ್ ಕುಮಾರ್ ಕರೆ

Public TV
2 Min Read

ಚಿಕ್ಕಮಗಳೂರು: ನಾವು ಸ್ವಾತಂತ್ರ್ಯ ಪೂರ್ವದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ. ಬ್ರಿಟಿಷರ ವಿರುದ್ಧ ಚಳುವಳಿಯಲ್ಲಿ ಭಾಗವಹಿಸದ ನಮಗೆ ಈಗ ಅವಕಾಶ ಸಿಕ್ಕಿದೆ. ನಾವೆಲ್ಲ ಕೊರೊನಾ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.

ನಗರದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶ್ನಾಕೋಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪತಿಯ ಶವ ಒಂದು ಕೋಣೆಯಲ್ಲಿ, ಹೆಂಡತಿ ಹಾಲ್‍ನಲ್ಲಿ ಇದ್ದರು. ಮೈಸೂರಿನಿಂದ ಬಂದ ಸಂಬಂಧಿ ಕಾರಿನಲ್ಲಿ ಮಲಗಿದ್ದಾರೆ. ಸಾವನ್ನಪ್ಪಿದವರ ಅಂತ್ಯಕ್ರಿಯೆ ಮಾಡಲು ಯಾರೂ ಇರಲಿಲ್ಲ. ಕೊನೆಗೆ ನಮ್ಮ ಹುಡುಗರೇ ಎಲ್ಲ ಕಾರ್ಯವನ್ನು ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿನ ಕೊರೊನಾ ಕರಾಳತೆಯನ್ನ ಬಿಚ್ಚಿಟ್ಟರು.

ಕೊರೊನಾ ಒಂದು ಅಹಂಕಾರದ ವೈರಸ್. ಅದಾಗಿಯೇ ನಮ್ಮ ಬಳಿ ಬರುವುದಿಲ್ಲ. ನಾವು ಆಹ್ವಾನ ಕೊಟ್ಟರೆ ಮಾತ್ರ ಬರಲಿದೆ. ಜನ ಸೂಕ್ತ ಕ್ರಮಗಳನ್ನು ಅನುಸರಿಸಿದರೆ ಲಾಕ್‍ಡೌನ್ ಅವಶ್ಯಕತೆ ಇಲ್ಲ. ಎಸ್.ಎಂ.ಎಸ್. ಪದ್ಧತಿ ಅನುಸರಿಸಿ. ಎಸ್ ಅಂದ್ರೆ ಸ್ಯಾನಿಟೈಸ್, ಎಂ ಅಂದ್ರೆ ಮಾಸ್ಕ್ ಹಾಗೂ ಎಸ್ ಅಂದ್ರೆ ಸೋಶಿಯಲ್ ಡಿಸ್ಟೆನ್ಸ್ ಇದನ್ನು ಅನುಸರಿಸಿದರೆ ಕೊರೊನಾದಿಂದ ದೂರ ಇರಬಹುದು. ನಮಗೆ ಕೊರೊನಾ ಬರುವುದಿಲ್ಲ ಎಂದು ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಯಾವುದೋ ಒಂದು ಸಾವು ನಮಗೆ ಸಂಖ್ಯೆ ಆಗಬಾರದು. ಆ ಮನೆಯ ದುಃಖ ನಮಗೆ ಅರ್ಥವಾಗಬೇಕು ಎಂದರು.

ಇದೇ ವೇಳೆ 1 ರಿಂದ 9ನೇ ತರಗತಿವರೆಗಿನ ಪರೀಕ್ಷೆ ಕುರಿತಂತೆ ಮಾತನಾಡಿದ ಅವರು, 1-9ನೇ ತರಗತಿ ಮಕ್ಕಳಿಗೆ ಪರೀಕ್ಷೆ ಮಾಡಬೇಕಾ, ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕಾ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಕರೆದು ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯ ಸ್ವೀಕರಿಸಿ ಒಂದು ಹಂತಕ್ಕೆ ಬಂದಿದ್ದೇವೆ. ಎರಡ್ಮೂರು ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನ ಪ್ರಕಟಿಸಲಿದೆ ಎಂದು ವಿವರಿಸಿದರು.

ಬೆಂಗಳೂರಲ್ಲಿ ಬೆಡ್‍ಗಳಿಗೆ ತೊಂದರೆಯಾಗುತ್ತಿದೆ. ಇನ್ನು ಎರಡು ದಿನದಲ್ಲಿ ಎಲ್ಲ ತಹಬದಿಗೆ ಬಂದು ಸಮಸ್ಯೆ ಬಗೆಹರಿಯುತ್ತೆ ಎಂದಿದ್ದಾರೆ. ಬೆಂಗಳೂರಲ್ಲಿ ಎಂಟು ಝೋನ್‍ಗಳಿವೆ. ಎಲ್ಲ ಝೋನ್‍ಗಳಿಗೂ ಎಂಟು ಜನ ಉಸ್ತುವಾರಿಗಳಿದ್ದೇವೆ. ನಮ್ಮ ಪ್ರಕಾರ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇರುತ್ತೆ. ಅಲ್ಲಿಗೆ ರೋಗಿ ಹೋದಾಗ ವಾಕಿಂಗ್ ಪೇಶೆಂಟ್ ಬಂದರು ಸೇರಿಸಿಕೊಂಡಿದ್ದೇವೆ ಎಂದು ಆಸ್ಪತ್ರೆಯವರು ಹೇಳುತ್ತಾರೆ. ಅದಕ್ಕಾಗಿ ಪ್ರತಿ ಆಸ್ಪತ್ರೆಗೆ ಓರ್ವ ನೋಡೆಲ್ ಅಧಿಕಾರಿ ನೇಮಿಸಿದ್ದೇವೆ. ಅವರಿಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಗೊತ್ತಿರುತ್ತೆ. ಆಸ್ಪತ್ರೆ ಹಾಗೂ ಸರ್ಕಾರ ಎರಡು ಕಡೆಯ ಅಧಿಕಾರಿಗಳಿರುತ್ತಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಸ್ಥಳಿಯ ಪೊಲೀಸ್ ಠಾಣೆಗೂ ರಿಪೋರ್ಟ್ ಮಾಡಲು ಸೂಚಿಸಿದ್ದೇವೆ. ಇನ್ನು ಎರಡು ದಿನದಲ್ಲಿ ಎಲ್ಲಾ ತಹಬದಿಗೆ ಬಂದು ಬೆಡ್ ಸಮಸ್ಯೆ ಬಗೆಹರಿಯಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *