ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಜೊತೆಗಿದ್ದೇವೆ: ಟ್ರಂಪ್

Public TV
2 Min Read

– ಭಾರತಕ್ಕೆ ಅಮೆರಿಕದಿಂದ ವೆಂಟಿಲೇಟರ್ ದಾನ

ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಮೋದಿ ಮತ್ತು ಭಾರತದ ಜೊತೆಗೆ ಇದ್ದೇವೆ. ನಾವು ಇಂಡಿಯಾಗೆ ವೆಂಟಿಲೇಟರ್ ಗಳನ್ನು ಸಪ್ಲೈ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತದಲ್ಲಿ 85,000 ಸಾವಿರಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ ಚೀನಾಗಿಂತ ಭಾರತದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಈಗ 83 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈಗ ಅಮೆರಿಕ ಕೂಡ ಕೊರೊನಾ ವಿರುದ್ಧ ಹೋರಾಟದಲ್ಲಿ ಇಂಡಿಯಾ ಜೊತೆ ಕೈ ಜೋಡಿಸುವುದಾಗಿ ಘೋಷಣೆ ಮಾಡಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಅಮೆರಿಕ ವೆಂಟಿಲೇಟರ್ ಗಳನ್ನು ದಾನ ಮಾಡುತ್ತದೆ ಎಂದು ಘೋಷಿಸಲು ನನಗೆ ಹೆಮ್ಮೆ ಇದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಭಾರತ ಮತ್ತು ನರೇಂದ್ರ ಮೋದಿ ಅವರ ಜೊತೆಗೆ ನಿಲ್ಲುತ್ತೇವೆ. ಜೊತೆಗೆ ಕೊರೊನಾಗೆ ಲಸಿಕೆ ತಯಾರಿಸಲು ನಾವು ಭಾರತದ ಜೊತೆ ಸಹಕರಿಸುತ್ತಿದ್ದೇವೆ. ನಾವು ಒಟ್ಟಾಗಿ ಕಣ್ಣಿಗೆ ಕಾಣದ ಶತ್ರುವನ್ನು ಸೋಲಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಭಾರತ ಮತ್ತು ಅಮೆರಿಕದ ಸಂಬಂಧ ಚೆನ್ನಾಗಿದ್ದು, ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ಕಳೆದ ತಿಂಗಳು 50 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಗೆ ರಫ್ತು ಮಾಡಿತ್ತು. ಅಮೆರಿಕದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ರೋಗಿಗಳಿಗೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕೆಂದು ಟ್ರಂಪ್ ಭಾರತಕ್ಕೆ ಮನವಿ ಮಾಡಿದ್ದರು. ಭಾರತ ಕೂಡ ಮಾತ್ರೆಗಳನ್ನು ರಫ್ತು ಮಾಡಿತ್ತು.

ಭಾರತಕ್ಕೆ ವೆಂಟಿಲೇಟರ್ ನೀಡುವ ವಿಚಾರದಲ್ಲಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ, ನಮ್ಮ ಅಧ್ಯಕ್ಷರು ಭಾರತದೊಂದಿಗೆ ನಮ್ಮ ಉತ್ತಮ ಸಂಬಂಧವನ್ನು ಶ್ಲಾಘಿಸಿದರು. ಭಾರತದ ನಮಗೆ ಉತ್ತಮ ಸ್ನೇಹಿ ದೇಶವಾಗಿದೆ. ಅವರಿಗೆ ವೆಂಟಿಲೇಟರ್ ಗಳನ್ನು ನೀಡುತ್ತಿದ್ದೇವೆ. ಜೊತೆಗೆ ಬೇರೆ ದೇಶಗಳಿಗೂ ನಾವು ವೆಂಟಿಲೇಟರ್ ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಭಾರತಕ್ಕೆ ಎಷ್ಟು ವೆಂಟಿಲೇಟರ್ ನೀಡುತ್ತೇವೆ ಎಂದು ಅಮೆರಿಕ ತಿಳಿಸಿಲ್ಲ.

ಇದೇ ವೇಳೆ ಭಾರತದ ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿರುವ ಟ್ರಂಪ್, ಇಂಡಿಯಾ ತುಂಬ ವಿಶಾಲವಾದ ದೇಶ. ನಿಮಗೆ ತಿಳಿದಿರುವಂತೆ ಭಾರತದ ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನಾನು ಈ ಹಿಂದೆ ಭಾರತಕ್ಕೆ ಹೋಗಿ ಬಂದಿದ್ದೆ. ನಾವು ಒಟ್ಟಿಗೆ ಇದ್ದೇವೆ ಎಂದು ಹೇಳುವ ಮೂಲಕ ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಮಯವನ್ನು ಟ್ರಂಪ್ ಅವರು ನೆನಪು ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಭಾರತದೊಂದಿಗೆ ಸೇರಿಕೊಂಡು ಕೊರೊನಾಗೆ ಲಸಿಕೆ ಕಂಡುಹಿಡಿಯಲು ಟ್ರಂಪ್ ಅವರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಭಾರತ ಮತ್ತು ಅಮೆರಿಕ ತಜ್ಞರನ್ನೊಳಗೊಂಡ ಒಂದು ತಂಡವನ್ನು ರಚಿಸಿದ್ದಾರೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ನಾವು ಕೊರೊನಾಗೆ ನಿರ್ದಿಷ್ಟ ಲಸಿಕೆಯನ್ನು ಸಿದ್ಧ ಪಡಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *