ಕೊರೊನಾ ವಿಚಾರದಲ್ಲಿ ಬಿಜೆಪಿ ಸುಳ್ಳನ್ನೇ ಸತ್ಯವಾಗಿಸುತ್ತಿದೆ: ರಾಹುಲ್ ಗಾಂಧಿ

Public TV
2 Min Read

– ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದೆ
– ಹೆಚ್ಚು ಪರೀಕ್ಷೆ ನಡೆಸುತ್ತಿಲ್ಲ, ಸಾವಿನ ಸಂಖ್ಯೆ ಸಹ ಸುಳ್ಳು

ನವದೆಹಲಿ: ಕೊರೊನಾ ವೈರಸ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು, ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಬಿಜೆಪಿ ಸುಳ್ಳನ್ನು ಸತ್ಯವೆಂದು ಹೇಳುತ್ತಿದೆ. ಈ ಭ್ರಮೆ ಶೀಘ್ರದಲ್ಲೇ ಬಯಲಾಗಲಿದ್ದು, ಭಾರತ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಮೂರು ವಿಷಯಗಳ ಕುರಿತು ಗಮನ ಸೆಳೆದಿರುವ ರಾಹುಲ್ ಗಾಂಧಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕುರಿತು ಬಿಜೆಪಿ ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದೆ. ಪರೀಕ್ಷೆಗಳನ್ನು ಹೆಚ್ಚು ನಡೆಸುತ್ತಿಲ್ಲ. ಅಲ್ಲದೆ ಸಾವಿನ ಸಂಖ್ಯೆಯ ವರದಿಯನ್ನು ಸಹ ತಪ್ಪಾಗಿ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಇದನ್ನು ರಾಹುಲ್ ಗಾಂಧಿ ಅವರು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಗಮನಕ್ಕೆ ಬರುತ್ತಿಲ್ಲ. ಅಲ್ಲದೆ ಸಾವನ್ನಪ್ಪಿದ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿಲ್ಲ ಎಂದು ಇಂಗ್ಲಿಷ್ ಮಾಧ್ಯಮ ವರದಿ ಮಾಡಿದೆ. ಈ ಲಿಂಕ್ ಶೇರ್ ಮಾಡಿ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ ಇರುವ ಕುರಿತು ಮಾಹಿತಿ ನೀಡಿತ್ತು. ಪ್ರತಿ ಮಿಲಿಯನ್ ಜನರಲ್ಲಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪುವವರ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಇದೆ ಎಂದು ಹೇಳಿಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಕೊರೊನಾ ಸ್ಥಿತಿಗತಿ ವರದಿ-168 ಆಧರಿಸಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಪ್ರಮಾಣ ಪ್ರತಿ ಮಿಲಿಯನ್ ಜನರಲ್ಲಿ 505.37 ಇದೆ. ವಿಶ್ವದಲ್ಲಿ ಇದು 1,453.25 ಇದೆ ಎಂದು ಡಬ್ಲ್ಯುಎಚ್‍ಒ ವರದಿಯಲ್ಲಿ ಹೇಳಲಾಗಿದೆ.

ಜಿಡಿಪಿ ಲೆಕ್ಕಾಚಾರದ ಕುರಿತು ಸಹ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಹೊಸ ಲೆಕ್ಕಾಚಾರ ವಿಧಾನದ ಮೂಲಕ ಜಿಡಿಪಿಯಲ್ಲಿ ಸಹ ಬಿಜೆಪಿ ಸುಳ್ಳನ್ನು ಸತ್ಯವೆಂದು ಹೇಳುತ್ತಿದೆ. ಇದೇ ವರ್ಷ ಜನವರಿಯಲ್ಲಿ ಇಂಟರ್‍ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್) ತನ್ನ ವಾರ್ಷಿಕ ಸಿಬ್ಬಂದಿ ವರದಿಯಲ್ಲಿ ಜಿಡಿಪಿಯನ್ನು ‘ಸಂಕೀರ್ಣ’ ವಾಗಿ ಲೆಕ್ಕ ಹಾಕಲು ತಿಳಿಸಿದೆ. ಅಲ್ಲದೆ ಜಿಡಿಪಿ ಲೆಕ್ಕಾಚಾರದ ವಿಧಾನದ ಕುರಿತು ಸ್ಪಷ್ಟತೆ ನೀಡುವಂತೆ ಭಾರತ ರಿಸರ್ವ್ ಬ್ಯಾಂಕ್‍ನ ಮಾಜಿ ಗವರ್ನರ್ ಸಿ.ರಂಗರಾಜನ್ ಕಳೆದ ತಿಂಗಳು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವನ್ನು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ.

ಅಲ್ಲದೆ ಮಾಧ್ಯಮಗಳನ್ನು ಹೆದರಿಸುವ ಮೂಲಕ ಚೀನಾದ ಆಕ್ರಮಣಶೀಲತೆ ಬಗ್ಗೆ ಬಿಜೆಪಿ ಸುಳ್ಳುಗಳನ್ನು ಸತ್ಯವೆಂದು ಬಿಂಬಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *