ಕೊರೊನಾ ಲಸಿಕೆ ವಿತರಣೆ ಹೇಳಿದಷ್ಟು ಸುಲಭವಲ್ಲ – ಏನಿದು ಕೋಲ್ಡ್‌ ಚೈನ್‌? ಸವಾಲು ಏನು?

Public TV
4 Min Read

ಕೋವಿಡ್‌ 19ಗೆ ಇನ್ನು 3-4 ತಿಂಗಳಿನಲ್ಲಿ ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ. ಕೇಂದ್ರ ಸಚಿವರೇ ಅಧಿಕೃತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಲಸಿಕೆಯನ್ನು ಹೇಗೆ ಹಂಚಿಕೆ ಮಾಡಬಹುದು? ಸಾಧಾರಣವಾಗಿ ಲಸಿಕೆಯನ್ನು ಹೇಗೆ ಕಂಪನಿಯಿಂದ ಆಸ್ಪತ್ರೆಗೆ ಸಾಗಿಸಲಾಗುತ್ತದೆ? ಯಾರಿಗೆ ಮೊದಲು ಲಸಿಕೆ ಸಿಗಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

ಹೇಗೆ ವಿತರಣೆ ಮಾಡಲಾಗುತ್ತದೆ?
ಸೋಂಕಿಗೆ ಲಸಿಕೆಯನ್ನು ಕಂಡುಹಿಡಿಯುವುದು ಒಂದು ಸವಾಲು ಆದರೆ ಕಂಡುಹಿಡಿದ ಲಸಿಕೆಯನ್ನು ವಿತರಿಸುವುದು ಮತ್ತೊಂದು ಸವಾಲಿನ ಕೆಲಸ. ಕಂಪನಿ ಲಸಿಕೆಯನ್ನು ಕಂಡುಹಿಡಿದ ಬಳಿಕ ಅದನ್ನು ಕೋಲ್ಡ್‌ ಚೈನ್‌ ಮೂಲಕ ಅಂತಿಮವಾಗಿ ಜನರಿಗೆ ತಲುಪಿಸಲಾಗುತ್ತದೆ. ಕೋಲ್ಡ್‌ ಚೈನ್‌ ಪ್ರಕ್ರಿಯೆ ಬಹಳ ಕಷ್ಟದ ಕೆಲಸ. ಸಾಗಾಣಿಕೆಯ ವೇಳೆ ಸಣ್ಣ ಎಡವಟ್ಟು ಆದರೂ ಲಸಿಕೆ ಹಾಳಾಗಬಹುದು. ಲಸಿಕೆಗಳನ್ನು, ಔಷಧಿಗಳನ್ನು ಫ್ರಿಡ್ಜ್‌ ಅಥವಾ ಕೋಲ್ಡ್‌ ಸ್ಟೋರೇಜ್‌, ಐಸ್‌ ತುಂಬಿರುವ ಬಾಕ್ಸ್‌ಗಳಲ್ಲಿ ಇಡುತ್ತಾರೆ. ತಾಪಮಾನ ಜಾಸ್ತಿಯಾದರೆ ಲಸಿಕೆ ಹಾಳಾಗಿ ವಿರುದ್ಧ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಏನಿದು ಕೋಲ್ಡ್‌ ಚೈನ್‌?
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ‘ಕೋಲ್ಡ್ ಚೈನ್’ ಎನ್ನುವುದು ಉತ್ಪಾದನಾ ಹಂತದಿಂದ ಬಳಕೆಯ ಹಂತದವರೆಗೆ ಶಿಫಾರಸು ಮಾಡಿದ ತಾಪಮಾನದಲ್ಲಿ ಲಸಿಕೆಗಳನ್ನು ಸಂಗ್ರಹಿಸಿ ಸಾಗಿಸುವ ವ್ಯವಸ್ಥೆ. ವಿಮಾನಗಳು, ಟ್ರಕ್‌ಗಳು ಮತ್ತು ಕೋಲ್ಡ್ ಸ್ಟೋರೇಜ್ ಗೋದಾಮುಗಳು ಈ ಮೂರು ಕೋಲ್ಡ್‌ ಚೈನ್‌ನಲ್ಲಿ ಇರುವ ಪ್ರಮುಖ ಭಾಗಗಳು. ಕೊರೊನಾ ವಿಶ್ವವ್ಯಾಪಿ ಹರಡಿರುವ ಸೋಂಕು ಆಗಿರುವ ಕಾರಣ ವಿಭಿನ್ನ ತಾಪಮಾನಗಳು ಮತ್ತು ವಿಭಿನ್ನ ನಿರ್ವಹಣಾ ವಿಧಾನಗಳ ಮೂಲಕ ಲಸಿಕೆಯನ್ನು ಸಾಗಿಸಬೇಕಾಗುತ್ತದೆ.

ಇಂಟರ್‌ನ್ಯಾಷನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ವರದಿಯ ಪ್ರಕಾರ ವಾರ್ಷಿಕವಾಗಿ ಉತ್ಪಾದನೆಯಾದ ಸ್ಥಳದಿಂದ ಗಮ್ಯ ಸ್ಥಳವನ್ನು ತಲುಪುವ ವೇಳೆಗೆ ಶೇ.25ರಷ್ಟು ಲಸಿಕೆಗಳು ತಾಪಮಾನ ದೋಷದಿಂದ ಹಾಳಾಗುತ್ತದೆ. ಇದರಿಂದ ವಾರ್ಷಿಕವಾಗಿ 34.1 ಶತಕೋಟಿ ಡಾಲರ್‌ ನಷ್ಟವಾಗುತ್ತಿದೆ ಎಂದು ಹೇಳಿದೆ.

ಕೋವಿಡ್‌ 19 ಲಸಿಕೆಗಳನ್ನು ಯಾವ ತಾಪಮಾನದಲ್ಲಿ ಸಂಗ್ರಹಿಸಬೇಕು?
ದಢಾರ, ಮಂಪ್ಸ್, ರುಬೆಲ್ಲಾ ಮತ್ತು ವರಿಸೆಲ್ಲಾಗೆ ಹಾಕುವ ಎಂಎಂಆರ್‌ವಿ ಮತ್ತು ಜೋಸ್ಟರ್ ಲಸಿಕೆಗಳನ್ನು -50 ಡಿಗ್ರಿ ಸೆಲ್ಸಿಯಸ್ ಮತ್ತು -15 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ.  ಬಿಸಿಜಿಯಂತಹ ಇತರ ಸಾಂಪ್ರದಾಯಿಕ ಲಸಿಕೆಗಳನ್ನು ಸಾಮಾನ್ಯವಾಗಿ -25 ಡಿಗ್ರಿ ಸೆಲ್ಸಿಯಸ್ ಮತ್ತು -15  ಡಿಗ್ರಿ ಸೆಲ್ಸಿಯಸ್‌ ನಡುವಿನ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಈ ಕಾರಣಕ್ಕೆ ಕೆಲವು ಪ್ರಮುಖ ಕೋವಿಡ್ -19 ಲಸಿಕೆಗಳನ್ನು ಹೆಚ್ಚು ತಂಪಾದ ತಾಪಮಾನದಲ್ಲಿ ಸಂಗ್ರಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಫೈಜರ್ ಮತ್ತು ಮೊಡೆರ್ನಾದ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ‌  ಸಂಗ್ರಹಿಸಡಬೇಕಾಗುತ್ತದೆ. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುತ್ತಿರುವ ಆಕ್ಸ್‌ಫರ್ಡ್‌ ಲಸಿಕೆ ಕೋವಿಶೀಲ್ಡ್‌ ಅನ್ನು ಫ್ರಿಡ್ಜ್‌ನಲ್ಲಿ ಇರಿಸಿದರೂ ಯಾವುದೇ ಹಾನಿಯಾಯಾಗುವುದಿಲ್ಲ. 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬಹುದು ಎಂದು ಸೀರಂ ತಿಳಿಸಿದೆ.

ಕೋಲ್ಡ್ ಚೈನ್ ಮುಖ್ಯ ಯಾಕೆ?
ಲಸಿಕೆಗಳು ಸೂಕ್ಷ್ಮ ಉತ್ಪನ್ನವಾಗಿದ್ದು ಅತಿಯಾದ ಶಾಖ, ಬೆಳಕು ಅಥವಾ ಶೀತದಲ್ಲಿ ಹಾನಿಗೊಳಗಾಗಬಹುದು. ಈ ಕಾರಣಕ್ಕೆ ತಾಪಮಾನ-ನಿಯಂತ್ರಿತ ವ್ಯವಸ್ಥೆಯ ಮೂಲಕ ಸಂಗ್ರಹಿಸಿ ಸರಬರಾಜು ಮಾಡಬೇಕಾಗುತ್ತದೆ.

 ಸಂಗ್ರಹಿಸಲು, ವಿತರಿಸಲು ಇರುವ ಸಮಸ್ಯೆಗಳೇನು?
ಕೊರೊನಾ ಒಂದು ಪ್ರದೇಶ, ಒಂದು ದೇಶಕ್ಕೆ ಮೀಸಲಾಗಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಇದು ಸಾಂಕ್ರಾಮಿಕ ಸೋಂಕು ಆಗಿದ್ದು ವಿಶ್ವಕ್ಕೆ ಹರಡಿರುವ ಕಾರಣ ಲಸಿಕೆ ವಿತರಣೆ ಮಾಡುವುದು ಸವಾಲಿನ ಕೆಲಸ. ಮೂಲಸೌಕರ್ಯ ಮತ್ತು ಶೇಖರಣಾ ಸೌಲಭ್ಯಗಳಲ್ಲಿ ಹೂಡಿಕೆ, ವಿಶೇಷವಾಗಿ ಅಲ್ಟ್ರಾಕೋಲ್ಡ್ ಘನೀಕರಿಸುವ ಸಾಮರ್ಥ್ಯ ಕೋವಿಡ್ ಲಸಿಕೆ ಅಭಿವೃದ್ಧಿ ನಡೆಯುತ್ತಿರುವ ವೇಗದಲ್ಲಿ ನಡೆಯುತ್ತಿಲ್ಲ. ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಮಾತ್ರ ಸೌಲಭ್ಯವಿದೆ. ಹೀಗಾಗಿ ಆರಂಭಿಕ ಹಂತದಲ್ಲಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ವಿತರಿಸಲಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಭಾರತದಂತಹ ತಾಪಮಾನ ಹೆಚ್ಚಿರುವ ದೇಶದಲ್ಲಿ ಲಸಿಕೆಯನ್ನು ಎಲ್ಲ ಜನರಿಗೆ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚುವರಿ ಕೋಲ್ಡ್ ಚೈನ್ ಶೇಖರಣಾ ಸೌಲಭ್ಯಗಳನ್ನು ಗುರುತಿಸಲು ಪ್ರಾರಂಭಿಸಿದೆ. ಇದನ್ನೂ ಓದಿ: ಲಸಿಕೆ ಸ್ಟೋರೇಜ್‍ಗೆ ಸಿದ್ಧವಾಗುತ್ತಿದೆ ಬೆಂಗಳೂರಿನ ದಾಸಪ್ಪ ಆಸ್ಪತ್ರೆ

ಲಸಿಕೆಯ ಜೊತೆಗೆ ಸೀಸೆ, ಆಲ್ಕೋಹಾಲ್‌ ಸ್ವಾಬ್‌, ಸಿರಿಂಜ್‌ ಇತ್ಯಾದಿ ವಸ್ತುಗಳು ಸಹ ಬೇಕಾಗುತ್ತದೆ. ಈ ವಸ್ತುಗಳು ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕಾಗುತ್ತದೆ. ಮೆಡಿಕಲ್‌ ವಸ್ತು ಉತ್ಪಾದನೆಯನ್ನು ಭಾರತ ಮುಂಚೂಣಿಯಲ್ಲಿ ಇರುವ ಕಾರಣ ಈ ವಸ್ತುಗಳಿಗೆ ಸಮಸ್ಯೆಯಾಗಲಾರದು.

ಬೇರೆ ದೇಶಗಳು ಏನು ಮಾಡುತ್ತಿವೆ?
ಅಮೆರಿಕದ ಯುನೈಟೆಡ್ ಪಾರ್ಸೆಲ್ ಸರ್ವಿಸ್(ಯುಪಿಎಸ್‌) ಮತ್ತು ಜರ್ಮನ್ ಲಾಜಿಸ್ಟಿಕ್ಸ್ ಕಂಪನಿ ಡಿಹೆಚ್ಎಲ್ ನಂತಹ ಹಲವಾರು ಲಾಜಿಸ್ಟಿಕ್ಸ್ ಕಂಪನಿಗಳು ಈಗಾಗಲೇ ಹೊಸ ಶೇಖರಣಾ ಸೌಲಭ್ಯಗಳನ್ನು ನಿರ್ಮಿಸಲು ಪ್ರಾರಂಭಿಸಿವೆ. ಬ್ಲೂಮ್‌ಬರ್ಗ್‌ ವರದಿಯಂತೆ ಫುಟ್ಬಾಲ್ ಮೈದಾನದ ಗಾತ್ರದ ಎರಡು ಫ್ರೀಜರ್ ಫಾರ್ಮ್‌ಗಳನ್ನು ಯುಪಿಎಸ್‌ ನಿರ್ಮಿಸುತ್ತಿದೆ.

ಭಾರತದಲ್ಲಿ ವಿತರಣೆ ಹೇಗೆ?
ಆರಂಭದಲ್ಲಿ ದೇಶದ 25-30 ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರ ಸಿದ್ಧತೆ ಮಾಡಿಕೊಂಡಿದೆ. ಜೂನ್ ಹೊತ್ತಿಗೆ 40-50 ಕೋಟಿ ಡೋಸ್ ಸಿದ್ಧವಾಗಲಿದ್ದು ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತದೆ. ಕೊರೊನಾ ವಾರಿಯರ್ಸ್, ಆರೋಗ್ಯ ಸಿಬ್ಬಂದಿಗೆ ಮೊದಲ ಆದ್ಯತೆಯ ಬಳಿಕ ವಯೋವೃದ್ಧರು, ರೋಗಪೀಡಿತರಿಗೂ ಲಸಿಕೆ ನೀಡಲಾಗುತ್ತದೆ. ವಯಸ್ಸಿನ ಆಧಾರದ ಮೇಲೆಯೂ ಕೊರೋನಾ ಲಸಿಕೆ ಹಾಕಲಾಗುತ್ತದೆ. ಲಸಿಕೆ ಎಲ್ಲಿದೆ? ಹೇಗೆ ಹಂಚಿಕೆ ಆಗ್ತಿದೆ ಎಂಬುದರ ಬಗ್ಗೆ ಇ-ಟ್ರ್ಯಾಕಿಂಗ್ ಮಾಡಿ ನಿಗಾ ಇಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *