ಕ್ವಾರಂಟೈನ್‍ಗಾಗಿ 19 ಅಂತಸ್ತಿನ ಹೊಸ ಕಟ್ಟಡ ನೀಡಿದ ಬಿಲ್ಡರ್

Public TV
1 Min Read

– ಇನ್ನೇನು ಮಾಲೀಕರಿಗೆ ಹಸ್ತಾಂತರಿಸಬೇಕಿದ್ದ ಫ್ಲ್ಯಾಟ್ ಸರ್ಕಾರಕ್ಕೆ ಹಸ್ತಾಂತರ
– 130 ಫ್ಲ್ಯಾಟ್‍ಗಳನ್ನು ಹೊಂದಿರುವ ಕಟ್ಟಡ

ಮುಂಬೈ: ಕೊರೊನಾದಿಂದಾಗಿ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಪ್ರತಿ ದಿನ ಸಾವಿರಾರು ಪ್ರಕರಣಗಳು ಪತ್ತೆಯಾಗುತ್ತಿದ್ದು, ಆಸ್ಪತ್ರೆಗಳ ಅಭಾವ ಉಂಟಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಗರದ ಬಿಲ್ಡರ್ ರಾಜ್ಯ ಸರ್ಕಾರಕ್ಕೆ ನೆರವಾಗಿದ್ದು, ಹೊಸದಾಗಿ ಕಟ್ಟಿಸಿದ 19 ಅಂತಸ್ತಿನ ಕಟ್ಟಡವನ್ನು ರೋಗಿಗಳ ಕ್ವಾರಂಟೈನ್‍ಗೆ ಬಿಟ್ಟು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಶೀಜಿ ಶರನ್ ಡೆವಲಪರ್ಸ್‍ನ ಬಿಲ್ಟರ್ ಮೆಹುಲ್ ಸಾಂಘ್ವಿ ಅವರು ಹೊಸ ಕಟ್ಟಡವನ್ನು ಬೃಹನ್ ಮುಂಬೈ ಕಾರ್ಪೋರೇಷನ್(ಬಿಎಂಸಿ)ಗೆ ಹಸ್ತಾಂತರಿಸಿದ್ದು, ಕೊರೊನಾ ರೋಗಿಗಳ ಕ್ವಾರಂಟೈನ್‍ಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ. ಮಲಾದ್‍ನ ಎಸ್‍ವಿ ರಸ್ತೆಯಲ್ಲಿ ಈ ಕಟ್ಟಡವಿದ್ದು, ಇದರಲ್ಲಿ 130 ಫ್ಲ್ಯಾಟ್‍ಗಳಿವೆ. ಈಗಾಗಲೇ ರಾಜ್ಯ ಸರ್ಕಾರದಿಂದ ಅಕ್ಯೂಪೇಶನ್ ಸರ್ಟಿಫಿಕೇಟ್ ಪಡೆದಿದ್ದು, ಫ್ಲ್ಯಾಟ್‍ಗಳನ್ನು ಮಾಲೀಕರಿಗೆ ಹಸ್ತಾಂತರಿಸಲು ಸಿದ್ಧವಾಗಿದೆ. ಆದರೆ ಕೊರೊನಾ ಸಂಕಷ್ಟದ ಹಿನ್ನೆಲೆ ಬಿಎಂಸಿಗೆ ಕಟ್ಟಡವನ್ನು ಹಸ್ತಾಂತರಿಸಿದ್ದಾರೆ.

ಪ್ರತಿ ಫ್ಲ್ಯಾಟ್‍ಗೆ ನಾಲ್ವರಂತೆ 300 ರೋಗಿಗಳನ್ನು ಈಗಾಗಲೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಲಾದ್ ಸಂಸದ ಗೋಪಾಲ್ ಶೆಟ್ಟಿ ಅವರು ಈ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ಪಾತ್ರವಹಿಸಿದ್ದಾರೆ. ಉತ್ತರ ಮುಂಬೈ ಸಂಸದ ಈ ಕುರಿತು ಪ್ರತಿಕ್ರಿಯಿಸಿ, ಮಲಾದ್ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕುರಿತು ಮೆಹುಲ್ ಸಾಂಘ್ವಿ ಬಳಿ ಕೇಳಿಕೊಂಡೆವು. ಅವರನ್ನು ಮನವೊಲಿಸಲು ಯಶಸ್ವಿಯಾದೆವು. ಹೀಗಾಗಿ ಕಟ್ಟಡವನ್ನು ಹಸ್ತಾಂತರಿಸಿದ್ದಾರೆ ಎಂದರು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮೆಹುಲ್ ಸಾಂಘ್ವಿ ಅವರು ಉತ್ತಮ ನಿರ್ಧಾರ ಕೈಗೊಂಡಿದ್ದು, ಕಟ್ಟಡವನ್ನು ಬಿಟ್ಟು ಕೊಟ್ಟಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಇದೇ ರೀತಿ ಇತರರು ಸಹ ಸ್ವಯಂ ಪ್ರೇರಿತರಾಗಿ ಸಹಾಯ ಮಾಡಬೇಕು. ಈ ಮೂಲಕ ಜೀವಗಳನ್ನು ಉಳಿಸಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಶನಿವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 3,874 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,28.205ಕ್ಕೆ ತಲುಪಿದೆ. ಒಟ್ಟು 5,984 ಜನ ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *