– ಸಂಬಂಧಿಕರನ್ನು ಕರೆ ತರಲು ಹೋಗಿದ್ದ ಯುವಕನಿಗೆ ಸೋಂಕು
ಹಾವೇರಿ: ಜಿಲ್ಲೆ ನಿನ್ನೆಯಷ್ಟೆ ಕೊರೊನಾ ಮುಕ್ತವಾಗಿತ್ತು. ಆದರೆ ಇಂದು ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಹಾವೇರಿ ತಾಲೂಕಿನ ಕೋಳೂರು ಗ್ರಾಮದ ನಿವಾಸಿ 23 ವರ್ಷದ ಯುವಕ ರೋಗಿ ನಂ.6517ಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಯುವಕ ಮಾರ್ಚ್‍ನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿದ್ದ ಸಂಬಂಧಿಕರನ್ನು ಕರೆ ತರಲು ಹೋಗಿದ್ದ. ಆದರೆ ಅಷ್ಟರಲ್ಲಾಗಲೇ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಮರಳಿ ಬರಲಾಗದೆ ಅಲ್ಲಿಯೇ ಲಾಕ್ ಆಗಿದ್ದ.
ಲಾಕ್‍ಡೌನ್ ಸಡಿಲಿಕೆ ನಂತರ ಜೂನ್ 3ರಂದು ಮಹಾರಾಷ್ಟ್ರದಿಂದ ಗದಗಗೆ ರೈಲಿನಲ್ಲಿ ಬಂದಿಳಿದು, ಅಲ್ಲಿಂದ ಬಸ್ ಮೂಲಕ ಹಾವೇರಿಗೆ ಬಂದು ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ. ಅಲ್ಲದೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪತಿಯೊಂದಿಗೆ ವಾಸವಾಗಿದ್ದ ಹಾವೇರಿ ನಗರದ ನಿವಾಸಿ 34 ವರ್ಷದ ಮಹಿಳೆಗೂ ಇಂದು ಸೋಂಕು ದೃಢಪಟ್ಟಿದೆ. ಸೋಂಕಿತ ಮಹಿಳೆ ಸಹ ಲಾಕ್‍ಡೌನ್ ನಂತರ ಜೂನ್ 3ರಂದು ಮಹಾರಾಷ್ಟ್ರದಿಂದ ಗದಗಗೆ ರೈಲಿನ ಮೂಲಕ ಆಗಮಿಸಿ, ನಂತರ ಬಸ್ ಮೂಲಕ ಹಾವೇರಿಗೆ ಬಂದು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರು.
ಜೂನ್ 10ರಂದು ಇಬ್ಬರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಇಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ನಿನ್ನೆಯವರೆಗೆ ಶೂನ್ಯವಾಗಿದ್ದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಈಗ ಮತ್ತೆ ಎರಡಕ್ಕೆ ಏರಿದೆ. ಜಿಲ್ಲೆಯಿಂದ ಕೊರೊನಾ ತೊಲಗಿತು ಎನ್ನುವಷ್ಟರಲ್ಲಿ ಮತ್ತೆ ಎರಡು ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ.