ಕೊರೊನಾ ಭೀತಿ- ಬೆಂಗ್ಳೂರಿನ ಠಾಣೆಗಳಿಗೆ 10 ಸೂಚನೆ ರವಾನಿಸಿದ ಭಾಸ್ಕರ್ ರಾವ್

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಕೊರೊನಾ ವಾರಿಯರ್ಸ್ ಪೊಲೀಸರಿಗೂ ಸೋಂಕು ತಗುಲುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು ನಗರದಲ್ಲಿ ಪೊಲೀಸರಿಗೆ ಸೋಂಕು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಗಳಿಗೆ ಹತ್ತು ಸೂಚನೆ ರವಾನಿಸಿದ್ದಾರೆ. ಈ ಮೂಲಕ ಕೊರೊನಾ ವೈರಸ್‍ಗೆ ಇಲಾಖೆ ಮತ್ತಷ್ಟು ಸಿಬ್ಬಂದಿ ಒಳಗಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಏನು ಸೂಚನೆ?:
1. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು. ಗಾಬರಿಯಾಗಬೇಡಿ, ಸರ್ಕಾರ ಸಮಾಜ ನಮ್ಮನ್ನ ನಂಬಿದೆ. ಎಲ್ಲಾ ಸ್ಟೇಷನ್‍ಗಳಲ್ಲಿ 55 ವರ್ಷ ಮೇಲ್ಪಟ್ಟವರು ಮನೆಯಲ್ಲಿ ಇರಬೇಕು. ಬೆಂಗಳೂರು ಬಿಡುವಂತಿಲ್ಲ. ಅಧಿಕಾರಿಗಳು ಮಾನಿಟರ್ ಮಾಡಬೇಕು.
2. ಸಾಧ್ಯವಾದಷ್ಟು ಯುವ ಹೋಂ ಗಾರ್ಡ್ ಬಳಕೆ ಮಾಡಿಕೊಳ್ಳಬೇಕು. ಜಂಟಿ ಸಿಪಿ ಡಿಸಿಪಿಗಳು ಮಾರ್ಗದರ್ಶನ ಮಾಡುತ್ತಾರೆ.
3. ಶಾಮಿಯಾನ ಹಾಕಿಕೊಂಡು ಠಾಣೆ ಹೊರಗಡೆಯಲ್ಲೆ ವಿಲೇವಾರಿ ಮಾಡಬೇಕು. ಆರೋಪಿಗಳು ಇರಲಿ ಯಾರೇ ಆಗಲಿ ಯಾರನ್ನೂ ಮುಟ್ಟಬಾರದು.

4. ಹೊಯ್ಸಳ ಮತ್ತು ಚೀತಾ ಅನವಶ್ಯಕವಾಗಿ ಸುತ್ತಾಡಬಾರದು. ಸಮಸ್ಯೆ ಇದ್ದರೆ, ಕರೆ ಬಂದ್ರೆ ಹೋಗಬೇಕು. ಸುಮ್ಮನೆ ಸ್ಟೇಷನ್‍ಗೆ ಬರಬಾರದು.
5. ಮುಖ್ಯ ಕೇಸ್‍ಗಳಲ್ಲಿ ಮಾತ್ರ ಆರೋಪಿಗಳನ್ನ ಬಂಧಿಸಬೇಕು. ಸುಮ್ಮನೆ ಬಂಧಿಸುವ ಅವಶ್ಯಕತೆ ಇಲ್ಲ, ಠಾಣೆಗೆ ಯಾರನ್ನೂ ಕರೆ ತಂದು ಕೂರಿಸಬಾರದು.
6. ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ಸಿದ್ಧಗೊಳಿಸಬೇಕು. ಸೋಂಕು ಮನೆಗೆ ತಗೊಂಡು ಹೋಗಬಾರದು.

7. ಪ್ರತಿ ಠಾಣೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಇರಬೇಕು. ಕುಡಿಯಲು, ಸ್ನಾನ, ಕೈಕಾಲು ತೊಳೆಯಲು, ಮಾಸ್ಕ್ ಸ್ಯಾನಿಟೈಸರ್, ಪೇಸ್ ಶೀಲ್ಡ್ ಇರಬೇಕು.
8. ನೀವು ಉಪಯೋಗಿಸುವ ವಾಹನಗಳು ಪ್ರತಿದಿನ ಸ್ಯಾನಿಟೈಸ್ ಆಗಬೇಕು. ಬೆಂಕಿ ಅನಾಹುತ ಆಗದಂತೆ ಸ್ಯಾನಿಟೈಸ್ ಮಾಡಬೇಕು. ಕ್ವಾರಂಟೈನ್ ಆಗಿದ್ದೀವಿ ಅಂತ ಸಾರ್ವಜನಿಕರಿಗೆ ನಮ್ಮ ಸೇವೆಯಿಂದ ಕೊರತೆ ಆಗಬಾರದು.
9. ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಒದಗಿಸಬೇಕು. ಗ್ಲೌಸ್ ಹಾಕಬೇಕು, ದೂರದಲ್ಲಿ ನಿಂತು ಮಾತನಾಡಬೇಕು.
10. ಎಂಒಬಿ ಕಾರ್ಡ್ ಬಂಧಿಸುವುದು ಬೇಡ, ತಾಂತ್ರಿಕವಾಗಿ ಅವರ ಮೇಲೆ ನಿಗಾ ಇಟ್ಟಿರಿ. ಅವರ ಮೇಲೆ ಇನ್ನೂ ನಿಗಾ ಹೆಚ್ಚಾಗಿರಬೇಕು. ನಾವು ಸುಮ್ಮನೆ ಇದ್ದೀವಿ ಅಂತ ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಕೊಡಬಾರದು, ಇನ್ಸ್‍ಪೆಕ್ಟರ್, ಪಿಎಸ್‍ಐಗಳು ಗಮನ ಇಡಬೇಕು.

ನಮ್ಮ ಸಿಬ್ಬಂದಿಗೆ ಊಟ ತಿಂಡಿ ಸರಿಯಾಗಿ ಆಗಬೇಕು. ಶನಿವಾರ ಆಸ್ಪತ್ರೆಯಲ್ಲಿ ಊಟದ ರೀತಿ ಮತ್ತೆ ಆಗಬಾರದು. ನಮ್ಮದು ಶಿಸ್ತಿನ ಇಲಾಖೆ. ಮುಖ್ಯ ಕಾರ್ಯದರ್ಶಿಗಳು ಇಲಾಖೆಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಪೊಲೀಸ್ ಕ್ವಾಟ್ರಸ್‍ಗಳು ಸ್ವಚ್ಛವಾಗಿರಬೇಕು. ಎಲ್ಲ ಮನೆಗಳಿಗೆ ಸ್ಯಾನಿಟೈಸರ್, ಮಾಸ್ಕ್ ಕೊಡಬೇಕು ಎಂದು ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *