ವಿಜಯಪುರ: ಕೊರೊನಾ ಭೀತಿಗೆ ಮತ್ತೊಂದು ಗ್ರಾಮ ಸ್ತಬ್ಧವಾಗಿದ್ದು, ಜಿಲ್ಲೆಯ ಸಿಂಧಗಿ ತಾಲೂಕಿನ ಗಣಿಹಾರ ಗ್ರಾಮ ಸಂಪೂರ್ಣ ಸ್ತಬ್ಧವಾಗಿದೆ.
ಗಂಟಲು ದ್ರವದ ವರದಿ ಬರುವ ಮುನ್ನವೇ ಸಾಂಸ್ಥಿಕ ಕ್ವಾರಂಟೈನ್ ನಿಂದ ಸೋಂಕಿತನಿಗೆ ಮುಕ್ತಿ ನೀಡಲಾಗಿತ್ತು. ಅಲ್ಲದೆ ನಂತರ ಹೋಮ್ ಕ್ವಾರಂಟೈನ್ ಆಗದೆ ಸೋಂಕಿತ ಗ್ರಾಮ ಸೇರಿದಂತೆ ಹಲವೆಡೆ ಓಡಾಟ ನಡೆಸಿದ್ದ. ಇನ್ನೂ ಸೋಂಕಿತನಿಗೆ ಶನಿವಾರ ಸೋಂಕು ಪತ್ತೆಯಾಗಿದ್ದು, ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮೇ 15 ರಂದು ಮಾಹಾರಾಷ್ಟ್ರದ ಸೋಲ್ಲಾಪುರದಿಂದ ಪತ್ನಿ ಮತ್ತು ಮಕ್ಕಳ ಜೊತೆ ಸೋಂಕಿತ ಗ್ರಾಮಕ್ಕೆ ಮಾವನ ಮನೆಗೆ ಬಂದಿದ್ದ. ಆಗ ಆಶಾ ಕಾರ್ಯಕರ್ತೆಯರ ಮಾಹಿತಿ ಮೆರೆಗೆ 14 ದಿನ ತಾಲೂಕಾಡಳಿತ ಕ್ವಾರಂಟೈನ್ ಮಾಡಿತ್ತು. ಆದರೆ ಪರೀಕ್ಷಾ ವರದಿ ಬರುವ ಮುನ್ನವೇ ಸೋಂಕಿತನನ್ನು ಸಾಂಸ್ಥಿಕ ಕ್ವಾರಂಟೈನ್‍ನಿಂದ ಮುಕ್ತಿ ನೀಡುವ ಮೂಲಕ ತಾಲೂಕಾಡಳಿತ ಮಹಾ ಎಡವಟ್ಟು ಮಾಡಿಕೊಂಡಿದೆ.
ಗಂಟಲು ದ್ರವದ ವರದಿ ಬರುವ ಮುನ್ನ ಸೋಂಕಿತನನ್ನ ಮನೆಗೆ ಕಳಿಸಿದ್ದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸೋಂಕಿತನ ಸಂಪರ್ಕಕ್ಕೆ ಬಂದ 25ಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಮಾಡಿದೆ. ಸೋಂಕಿತನ ಟ್ರಾವೆಲ್ ಹಿಸ್ಟರಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ತಮಗೂ ಸೋಂಕು ತಗುಲವ ಭೀತಿ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಗ್ರಾಮವನ್ನು ಲಾಕ್‍ಡೌನ್ ಮಾಡಿಕೊಂಡಿದ್ದಾರೆ.