ಕೊರೊನಾ ಭಯ- ನೋಟ್‍ಗಳನ್ನು ವಾಶಿಂಗ್ ಮಶೀನ್‍ಗೆ ಹಾಕಿದ್ರು

Public TV
1 Min Read

– ನೋಟುಗಳೆಲ್ಲ ಹಾಳು, ಬದಲಾಯಿಸಲು ಬ್ಯಾಂಕ್ ನಕಾರ

ಸಿಯೋಲ್: ಕೊರೊನಾ ಜನರನ್ನು ಯಾವ ಮಟ್ಟಿಗೆ ಭಯಪಡಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಸೋಂಕು ತಗುಲುವ ಭಯದಲ್ಲಿ ಇಲ್ಲೊಬ್ಬರು ನೋಟುಗಳನ್ನೇ ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ.

ದಕ್ಷಿಣ ಕೋರಿಯಾದ ಸಿಯೋಲ್‍ನಲ್ಲಿ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದು, ಅವರು ಪುರುಷನೋ ಮಹಿಳೆಯೋ ಎಂಬುದು ತಿಳಿದು ಬಂದಿಲ್ಲ. ಕೊರೊನಾ ವೈರಸ್ ತಗುಲುವುದರಿಂದ ತಪ್ಪಿಸಿಕೊಳ್ಳಲು 50,000 ವೋನ್(3,137 ರೂಪಾಯಿ)ನ್ನು ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ ಎಂದು ವರದಿಯಾಗಿದೆ.

ಕುಟುಂಬದವರು ನಿಧನರಾಗಿದ್ದಾಗ ಸಂಬಂಧಿಕರು ಹಾಗೂ ಸ್ನೇಹಿತರು ವ್ಯಕ್ತಿಗೆ ಈ 3,132 ರೂ. ಸಂತಾಪ ಹಣವಾಗಿ ನೀಡಿದ್ದಾರೆ. ಈ ಹಣ ನೀಡಿದವರಲ್ಲಿ ಯಾರಾದರೂ ಕೊರೊನಾ ಸೋಂಕಿತರು ಇದ್ದರೆ, ನನಗೂ ಕೊರೊನಾ ಸೋಂಕು ತಗುಲುತ್ತದೆ ಎಂದು ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ. ಆದರೆ ವಾಶಿಂಗ್ ಮಶೀನ್‍ನಲ್ಲಿ ಒಂದು ಬಾರಿ ಸ್ಪಿನ್ ಆಗುತ್ತಿದ್ದಂತೆ ನೋಡುಗಳು ಹಾನಿಯಾಗಿದ್ದು, ಉಪಯೋಗಕ್ಕೆ ಬರದಂತಾಗಿವೆ.

ನಂತರ ವ್ಯಕ್ತಿ ನೋಟುಗಳನ್ನು ತೆಗೆದುಕೊಂಡು ಬ್ಯಾಂಕ್ ಆಫ್ ಕೋರಿಯಾಗೆ ತೆರಳಿದ್ದು, ನೋಟುಗಳು ತುಂಬಾ ಹಾನಿಯಾಗಿವೆ ಬೇರೆ ನೋಟುಗಳನ್ನು ಕೊಡಿ ಎಂದು ಕೇಳಿದ್ದಾರೆ. ಆದರೆ ಬ್ಯಾಂಕ್‍ನವರು ಹೊಸ ನೋಟುಗಳನ್ನು ಕೊಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಕಡೆಗೆ 507ರ ಅರ್ಧದಷ್ಟು ಹಣವನ್ನು ನೀಡಿದ್ದು, ವಾಶೀಂಗ್ ಮಶೀನ್‍ನಲ್ಲಿ ಹಾಕಿದ್ದರಿಂದ ನೋಟುಗಳು ಪೂರ್ತಿ ಹಾಳಾಗಿದ್ದವು. ಹೀಗಾಗಿ ಎಷ್ಟು ನಗದು ಇತ್ತು ಎಂದು ನಿಖರವಾಗಿ ತಿಳಿದಿಲ್ಲ ಎಂದು ಬ್ಯಾಂಕ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಹಣವನ್ನು ವಾಶಿಂಗ್ ಮಶೀನ್ ಹಾಗೂ ಶಾಖಕ್ಕೆ ಇಡಬೇಡಿ ಎಂದು ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *