ಕೊರೊನಾ ಭಯದಿಂದ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

Public TV
1 Min Read

– ಕೋವಿಡ್ ಇದೆ ಎಂದು ತಿಳಿದು ನೊಂದಿದ್ದ ಯುವಕ

ಹೈದರಾಬಾದ್: ಕೊರೊನಾ ಎಂಬ ಮಹಾಮಾರಿ ವೈರಸ್ ದೇಶವನ್ನು ಒಕ್ಕರಿಸಿದ ಬಳಿಕ ಜನ ಕೋವಿಡ್‍ಗೆ ಬಲಿಯಾಗುವುದಕ್ಕಿಂತ ಹೆಚ್ಚು ಭಯದಿಂದಲೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಹೈದರಾಬಾದ್‍ನಲ್ಲೂ ಕೂಡ ಯುವಕನೊಬ್ಬ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ಹೌದು. 34 ವರ್ಷದ ಯುವಕ ಕೊರೊನಾ ವೈರಸ್ ಭೀತಿಯಿಂದ ಹುಸೈನ್ ಸಾಗರ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಕ್ರಮೇಣ ಆತನಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿದ್ದು, ವೈದ್ಯರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ತನಗೆ ಕೋವಿಡ್ ಇದೆ ಎಂಬುದನ್ನು ಅರಿತ ಯುವಕ ನೊಂದಿದ್ದಾನೆ. ಅಂತೆಯೇ ಯುವಕ ವೈದ್ಯರು ಸೂಚಿಸಿದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ ಅಲ್ಲಿ ಬೆಡ್ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಿನ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ.

ಇತ್ತ ಜುಲೈ 3ರಂದು ಯುವಕನಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಯುವಕ ತನ್ನ ಗೆಳೆಯನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾನೆ. ಗೆಳೆಯ ಯುವಕನನ್ನು ಆಸ್ಪತ್ರೆಯ ಸಮೀಪ ಬಿಟ್ಟಿದ್ದಾನೆ. ಬಳಿಕ ಯುವಕ ಅಲ್ಲಿಂದ ಕೆಲ ಮೀಟರಿನಷ್ಟು ನಡೆದುಕೊಂಡು ಹೋಗಿದ್ದು, ನಂತರ ಏಕಾಏಕಿ ನೀರಿಗೆ ಹಾರಿದ್ದಾನೆ.

ಸದ್ಯ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *