ಕೊರೊನಾ ಪ್ರಕರಣಗಳಲ್ಲಿ ಭಾರೀ ಹೆಚ್ಚಳ- ಮಹಾರಾಷ್ಟ್ರದ ನಾಗ್ಪುರ್ ಮಾ.21ರ ವರೆಗೆ ಲಾಕ್‍ಡೌನ್

Public TV
2 Min Read

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಹೀಗಾಗಿ ನಾಗ್ಪುರದಲ್ಲಿ ಮಾರ್ಚ್ 15ರಿಂದ 21ರ ವರೆಗೆ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ.

ನಾಗ್ಪುರ ಉಸ್ತುವಾರಿ ಸಚಿವ ನಿತಿನ್ ರಾವತ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ನಾಗ್ಪುರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಮಾರ್ಚ್ 15 ರಿಂದ 21ರ ವೆರೆಗೆ ಲಾಕ್‍ಡೌನ್ ವಿಧಿಸಲಾಗುವುದು ಎಂದು ತಿಳಿಸಿದರು.

ಲಾಕ್‍ಡೌನ್ ಅವಧಿಯಲ್ಲಿ ಖಾಸಗಿ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು, ಸರ್ಕಾರಿ ಕಚೇರಿಗಳಲ್ಲಿ ಶೇ.25ರಷ್ಟು ಜನ ಮಾತ್ರ ಕೆಲಸಕ್ಕೆ ಹಾಜರಾಗಲಿದ್ದಾರೆ. ಮದ್ಯವನ್ನು ಸಹ ಆನ್‍ಲೈನ್‍ನಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಸಂಚರಿಸಕೂಡದು ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ನಾಗ್ಪುರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದ್ದು, ವಾರಾಂತ್ಯದಲ್ಲಿ ಅನಗತ್ಯವಾಗಿ ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಮಾರ್ಚ್ 15ರಿಂದ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗುತ್ತಿದೆ.

ಇಂದು ಕೊರೊನಾ ವ್ಯಾಕ್ಸಿನ್‍ನ ಮೊದಲ ಡೋಸ್ ತೆಗೆದುಕೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬರುವ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಲಾಕ್‍ಡೌನ್ ವಿಧಿಸುವ ಅಗತ್ಯವಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

ಮಹಾರಾಷ್ಟ್ರದಲ್ಲಿ ಒಂದೇ ದಿನ 13,659 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 15 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗಿದ್ದು, ಮಹಾರಾಷ್ಟ್ರದ ಜನತೆ ಆತಂಕದಲ್ಲಿದ್ದಾರೆ. 2020 ಅಕ್ಟೋಬರ್ 7ರಂದು ಮಹಾರಾಷ್ಟ್ರದಲ್ಲಿ 14,578 ಕೊರೊನಾ ಪ್ರಕರಣಗಳು ಕಂಡು ಬಂದಿದ್ದವು. ಸದ್ಯ ಕಳೆದ 24 ಗಂಟೆಯಲ್ಲಿ 13 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ದೇಶದ ಶೇ.60ರಷ್ಟು ಪ್ರಕರಣಗಳು ವರದಿಯಾಗುತ್ತಿವೆ.

ದೇಶದಲ್ಲಿ ಬುಧವಾರ 22,854 ಜನರಿಗೆ ಸೋಂಕು ತಗುಲಿದ್ದು, 18,100 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 126 ಜನರನ್ನ ಕೊರೊನಾ ಬಲಿ ಪಡೆದುಕೊಂಡಿದ್ದು, ಇದುವರೆಗೂ 1,58,189 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ 1,89,226 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *