ಕೊರೊನಾ ನಿಯಂತ್ರಣ – ಕರ್ನಾಟಕದ ಸಾಧನೆ ಬೆಸ್ಟ್

Public TV
2 Min Read

ಬೆಂಗಳೂರು: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಕೊರೊನಾ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದೆ.

ಹೌದು. ಸೋಂಕಿತರ ಮೊದಲ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚುವಲ್ಲಿ ಕರ್ನಾಟಕದ ಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದು ಮಾಧ್ಯಮ ಸಂಸ್ಥೆಯೊಂದು ತಿಳಿಸಿದೆ. ಇದರ ಜೊತೆ 10 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಸಾವಿನ ಸಂಖ್ಯೆ ಸಹ ಕಡಿಮೆಯಿದೆ ಎಂದು ತಿಳಿಸಿದೆ. ಒಟ್ಟು 4 ಸಾವಿರಕ್ಕೂ ಹೆಚ್ಚು ಸೋಂಕಿತರು ಬಂದಿರುವ ರಾಜ್ಯಗಳನ್ನು ಪರಿಗಣಿಸಿ ಈ ಅಧ್ಯಯನ ನಡೆಸಲಾಗಿದೆ.

.

 

 

ಒಂದು ಸೋಂಕಿತ ಪ್ರಕರಣ ಕಂಡು ಬಂದಲ್ಲಿ ಕರ್ನಾಟಕದಲ್ಲಿ 47 ಮಂದಿಯನ್ನು ಕ್ವಾರಂಟೈನ್ ಮಾಡಿದರೆ, ತಮಿಳುನಾಡಿನಲ್ಲಿ 14, ಉತ್ತರ ಪ್ರದೇಶದಲ್ಲಿ 9, ಮಧ್ಯಪ್ರದೇಶದಲ್ಲಿ 7, ರಾಜಸ್ಥಾನದಲ್ಲಿ 6, ಬಿಹಾರದಲ್ಲಿ 5, ಗುಜರಾತ್ ನಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಮಹಾರಾಷ್ಟ್ರದಲ್ಲಿ 2, ದೆಹಲಿಯಲ್ಲಿ 2 ಮಂದಿಯನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಕ್ವಾರಂಟೈನ್‍ಗೆ ಒಳಗಾದ ವ್ಯಕ್ತಿಯ ಸಂಪರ್ಕ ಬಂದವರ ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ  ಕ್ವಾರಂಟೈನ್  ಒಳಗಾದ ವ್ಯಕ್ತಿಗಳ ಪರೀಕ್ಷೆ ನಡೆಸಿ ನೆಗೆಟಿವ್ ಫಲಿತಾಂಶ ಬಂದು 14 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಆರಂಭದಲ್ಲಿ ಮೂಲಕ್ಕೆ ಕೈ ಹಾಕಿ ಸೋಂಕಿತರನ್ನು ಪತ್ತೆ ಮಾಡಿದ ಪರಿಣಾಮ ಸೋಂಕು ಹರಡುವ ಸೂಪರ್ ಸ್ಪ್ರೇಡರ್ ಗಳ ಸಂಖ್ಯೆ ರಾಜ್ಯದಲ್ಲಿ ಬಹಳ ಕಡಿಮೆಯಿದೆ.

 

ಸಾವಿನ ಸಂಖ್ಯೆಗೆ ಹೋಲಿಸಿದರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬಿಹಾರ ಶೇ.58, ತಮಿಳುನಾಡು 0.80, ಕರ್ನಾಟಕ ಶೇ.1.30, ರಾಜಸ್ಥಾನದಲ್ಲಿ ಶೇ.2.17 ಮಂದಿ ಮೃತಪಟ್ಟಿದ್ದಾರೆ.

ಉತ್ತರಪ್ರದೇಶ ಶೇ.2.59, ದೆಹಲಿ ಶೇ.2.60, ಮಹಾರಾಷ್ಟ್ರ ಶೇ.3.46, ಮಧ್ಯಪ್ರದೇಶ ಶೇ.4.32, ಪಶ್ಚಿಮ ಬಂಗಾಳ ಶೇ.5.30, ಗುಜರಾತ್ ನಲ್ಲಿ ಶೇ.6.19 ಮಂದಿ ಸಾವನ್ನಪ್ಪಿದ್ದಾರೆ.

ಭಾನುವಾರದವರೆಗೆ ಕರ್ನಾಟಕದಲ್ಲಿ ಒಟ್ಟು 5,452 ಮಂದಿಗೆ ಸೋಂಕು ಬಂದಿದ್ದು, 2,132 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 3,257 ಸಕ್ರಿಯ ಪ್ರಕರಣಗಳಿದ್ದು, 61 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ. 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲೇ ಮೊದಲ ಸಾವು ಸಂಭವಿಸಿದ್ದು ಕರ್ನಾಟಕದಲ್ಲಿ. ಕಲಬುರಗಿಯ ವ್ಯಕ್ತಿ ಚಿಕಿತ್ಸೆ ಚಿಗದೇ ಸಾವನ್ನಪ್ಪಿದ್ದರು. ಕೂಡಲೇ ಸರ್ಕಾರ ಕೊರೊನಾ ಹರಡದಂತೆ ಕೈಗೊಂಡ ಕ್ರಮ ಮತ್ತು ಹೆಚ್ಚಿನ ಸಂಖ್ಯೆಯ ಜನ ಲಾಕ್‍ಡೌನ್ ಸರಿಯಾಗಿ ಪಾಲಿಸಿದ ಪರಿಣಾಮ ಕೋವಿಡ್ 19 ಹರಡುವ ಸಂಖ್ಯೆ ಕಡಿಮೆಯಾಗಿದೆ. ಆದರೆ ಈಗ ಮಹಾರಾಷ್ಟ್ರದಿಂದ ಬರುತ್ತಿರುವ ವಲಸಿಗರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.

https://www.facebook.com/nimmasuresh/posts/3532759530084700

Share This Article
Leave a Comment

Leave a Reply

Your email address will not be published. Required fields are marked *