ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರದ ತಂಡದ ಮೆಚ್ಚುಗೆ: ಸಚಿವ ಸುಧಾಕರ್

Public TV
2 Min Read

ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯದ ತಂಡ ಕರ್ನಾಟಕದಲ್ಲಿ ಕೋವಿಡ್-19 ಬಗ್ಗೆ ಮಾಹಿತಿ ಪಡೆಯಲು ಹಾಗೂ ಕೆಲವು ಸಲಹೆಗಳನ್ನು ನೀಡಲು ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ನಾವೆಲ್ಲರೂ ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಕೇಂದ್ರದ ಕೇಂದ್ರ ತಂಡದ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರದ ತಂಡದ ಜೊತೆ ಚರ್ಚೆ ಆಗಿದ್ದು, ಅನೇಕ ವಿಚಾರಗಳ ವಿನಿಮಯ ಆಗಿದೆ. ಪ್ರಮುಖವಾಗಿ ಕೊರೊನಾದಿಂದ ಸಾವಿನ ಪ್ರಮಾಣ ಕಡಿಮೆ ಮಾಡಲು ಕೇಂದ್ರ ತಂಡದಿಂದ ಸಲಹೆ ಬಂದಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.56 ರಷ್ಟಿದ್ದು, ಇದನ್ನು ಶೇ. 1% ಕ್ಕೆ ಇಳಿಸಲು ಕೇಂದ್ರ ತಂಡ ಸೂಚನೆ ನೀಡಿದೆ. ಇದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎಂದರು.

ರಾಜ್ಯ ಕ್ರಮಕ್ಕೆ ಮೆಚ್ಚುಗೆ!:
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕೆಲ ಕ್ರಮಗಳ ಬಗ್ಗೆ ಕೇಂದ್ರ ತಂಡದ ಮೆಚ್ಚುಗೆ ಸೂಚಿಸಿದೆ. ಪ್ರಮುಖವಾಗಿ ಮನೆ ಮನೆಗೆ ಭೇಟಿ ನೀಡಿ ಐಎಲ್‍ಐ ಪ್ರಕರಣಗಳ ಟೆಸ್ಟಿಂಗ್ ಸಾಮರ್ಥ್ಯ, ಟೆಲಿ ಐಸಿಯೂ ಹಾಗೂ ರಾಜ್ಯದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಳ, ಕ್ವಾರಂಟೈನ್, ರೋಗಿಗಳ ಸಾವಿನ ವರದಿ ಸಂಗ್ರಹ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರ ತಂಡದ ಸಲಹೆಗಳೇನು?:
ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರದ ತಂಡ ಇರುತ್ತದೆ. ಇಂದು ಕಂಟೈನ್ಮೆಂಟ್ ವಲಯ, ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿಲಿದೆ. ನಾಳೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಡಲಿದ್ದಾರೆ. ಸಭೆ ವೇಳೆ ಕೇಂದ್ರ ತಂಡದ ಕಂಟೈನ್ಮೆಂಟ್ ವಲಯದಲ್ಲಿ ಹೆಚ್ಚು ಪರೀಕ್ಷೆ ಮಾಡಲು ಸೂಚಿಸಿದ್ದಾರೆ. 60 ವರ್ಷ ಮೇಲ್ಪಟ್ಟ, 10 ವರ್ಷದ ಕೆಳಗಿನ ಮಕ್ಕಳು, ಗರ್ಭಿಣಿಯರ ಬಗ್ಗೆ ಎಚ್ಚರಿಕೆ. ಜನಜಂಗುಳಿ ಪ್ರದೇಶಗಳು, ಮಾರ್ಕೆಟ್ ಪ್ರದೇಶಗಳಲ್ಲೂ ಪರೀಕ್ಷೆ ಹೆಚ್ಚಿಸಲು ಸೂಚಿಸಿದ್ದಾರೆ ಎಂದು ವಿವರಿಸಿದರು.

ನಾವು ಕೇಂದ್ರದಿಂದ ಕೋವಿಡ್ ಕುರಿತು ವಿಶೇಷ ಅನುದಾನ ಕೇಳಲಿಲ್ಲ. ಆದರೆ ತಾಂತ್ರಿಕ ಸಲಹೆ ಕೇಳಿದ್ದೇವೆ. ಕಳೆದ 8 ದಿನಗಳಿಂದ ಕೋವಿಡ್ ಪ್ರಕರಣ ಜಾಸ್ತಿಯಾಗುತ್ತಿದೆ. ಇದನ್ನು ಕಡಿಮೆ ಮಾಡುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಸಭೆ ವೇಳೆ ಲಾಕ್‍ಡೌನ್ ಹಾಗೂ ಸಮುದಾಯಕ್ಕೆ ಸೋಂಕು ಹರಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಸೀಲ್‍ಡೌನ್ ಕ್ರಮವನ್ನು ಇನ್ನಷ್ಟು ಬಿಗಿ ಮಾಡ್ತೇವೆ ಅಷ್ಟೇ. ಅಂತರಜಿಲ್ಲೆ ಸಂಚಾರ ಬಂದ್ ಮಾಡುವ ಬಗ್ಗೆಯೂ ಚರ್ಚೆ ಆಗಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *