ಕೊರೊನಾ ನಾಗಾಲೋಟ ಯಾರೂ ನಿಲ್ಲಿಸಲು ಆಗಲ್ಲ: ಸಚಿವ ಸುಧಾಕರ್

Public TV
1 Min Read

– ಮರಣ ಪ್ರಮಾಣ ನಿಯಂತ್ರಿಸಬೇಕಿದೆ
– ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ

ಬೆಂಗಳೂರು: ಕೊರೊನಾ ನಾಗಾಲೋಟವನ್ನು ಯಾರೂ ನಿಲ್ಲಿಸಲು ಆಗಲ್ಲ. ಆದರೆ ಸಾವಿನ ಪ್ರಮಾಣ ಕಡಿಮೆ ಮಾಡುವುದೇ ಮುಖ್ಯವಾಗಿದೆ. ಲಸಿಕೆ ಬರೋವರೆಗೂ ಕೊರೊನಾ ಸಾವಿನ ಪ್ರಮಾಣ ಹೆಚ್ಚಾಗೋದು ಸ್ವಾಭಾವಿಕ. ಲಸಿಕೆ ಬರೋವರೆಗೆ ಜನ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ರಾಜಾಜಿನಗರದ ಇಎಸ್‍ಐ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮಾತನಾಡಿದ ಅವರು, ಅಮೆರಿಕದಲ್ಲಿ ನಮಗಿಂತ ಹೆಚ್ಚು ಸೋಂಕು, ಸಾವು ಇದೆ. ನಮ್ಮ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ, ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರಗಳಿಂದ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ನಮ್ಮಲ್ಲಿ ಸಾವಿನ ಪ್ರಮಾಣ ಸಹ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ಸೋಂಕಿತರ ಚಿಕಿತ್ಸೆ, ಸೌಲಭ್ಯ ಕುರಿತು ವೈದ್ಯರಿಂದ ಸಚಿವ ಸುಧಾಕರ್ ಮಾಹಿತಿ ಪಡೆದಿದ್ದು, ಇಎಸ್‍ಐ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಳವಾಗಿದ್ದು, ಈ ಕುರಿತು ಪರಿಶೀಲಿಸಿ ಇದಕ್ಕೆ ಕಾರಣ ತಿಳಿಯಲು ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಈ ವರೆಗೆ 421 ಕೊರೊನಾ ರೋಗಿಗಳು ದಾಖಲಾಗಿದ್ದಾರೆ. ಇದರಲ್ಲಿ 54 ಸೋಂಕಿತರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ.12.8 ರಷ್ಟಿದೆ. ಈ ರೀತಿ ಮರಣ ಹೆಚ್ಚಳವಾಗಲು ಕಾರಣ ಪತ್ತೆ ಮಾಡಬೇಕು. ಇದಕ್ಕಾಗಿ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇನ್ನೂ ಹಲವು ರೋಗಿಗಳು ತಡವಾಗಿ ಬಂದು ದಾಖಲಾಗಿದ್ದಾರೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಿದೆ. ಮರಣಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿ ರೂಪಿಸಲು ಆದೇಶಿಸಲಾಗಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *