ಕೊರೊನಾ ದೊಡ್ಡ ರೋಗವೇ ಅಲ್ಲ: ಸಚಿವ ರಮೇಶ್ ಜಾರಕಿಹೊಳಿ

Public TV
2 Min Read

– ಸಾಮಾಜಿಕ ಅಂತರ ಕಾಪಾಡಿ ಎಂದು, ತಾವೇ ನೂಕುನುಗ್ಗಲಿನಲ್ಲಿ ಭಾಗಿ
– ಜನಜಂಗುಳಿ ಮಧ್ಯೆ ಮಾಸ್ಕ್ ಧರಿಸದೆ ಸನ್ಮಾನ ಮಾಡಿಸಿಕೊಂಡ ರಮೇಶ್ ಜಾರಕಿಹೊಳಿ

ರಾಯಚೂರು: ಕೊರೊನಾ ದೊಡ್ಡ ರೋಗವೇ ಅಲ್ಲ, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿದರೆ ಮಾತ್ರ ಕಡಿಮೆ ಆಗುತ್ತದೆ ಎಂದು ಹೇಳುತ್ತಲೇ, ಸ್ವತಃ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೂಕುನುಗ್ಗಲಿನಲ್ಲಿ ಭರ್ಜರಿ ಸನ್ಮಾನ ಮಾಡಿಸಿಕೊಂಡಿದ್ದಾರೆ.

ರಾಯಚೂರಿನ ಮಸ್ಕಿಯ ಬುದ್ದಿನ್ನಿಯಲ್ಲಿ ನಡೆದ ನಂದವಾಡಗಿ ಏತನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಅವರ ಬೆಂಬಲಿಗರು ಸಚಿವರಿಗೆ ಸನ್ಮಾನ ಮಾಡಿದ್ದಾರೆ. ಈ ಮೂಲಕ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಸಚಿವ ಜಾರಕಿಹೊಳಿ, ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ, ಎಷ್ಟೇ ಲಾಕ್‍ಡೌನ್ ಮಾಡಿದರೂ, ಜನರು ಸಹಕಾರ ನೀಡಿದಾಗ ಮಾತ್ರ ಕೊರೊನಾ ತಡೆಯಲು ಸಾಧ್ಯ. ಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಪಾಡಬೇಕು. ಪ್ರಧಾನಿಯವರ ಮಾರ್ಗದರ್ಶನ ಹಾಗೂ ಯಡಿಯೂರಪ್ಪನವರ ಸೂಚನೆ ಪಾಲನೆ ಮಾಡಿದರೆ, ಅಲ್ಲದೆ ವೈದ್ಯರ ಸಲಹೆಗಳನ್ನು ಜನ ಪಾಲಿಸಿದರೆ ಕೊರೊನಾ ದೊಡ್ಡ ರೋಗ ಅಲ್ವೇ ಅಲ್ಲ ಎಂದು ಹೇಳಿದರು.

ಕೊರೊನಾದಿಂದ ಒಬ್ಬ ಸತ್ತರು ಸಾವೇ, ಸಾವಿರ ಸತ್ತರು ಸಾವೇ, ಸಾವು ಕಡಿಮೆ ಆಗಬೇಕು ಎಂಬುವುದು ಎಲ್ಲರ ಭಾವನೆ. ಯೂರೋಪ್ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಜನರು ಗಟ್ಟಿಯಿದ್ದಾರೆ. ಕೊರೊನಾ ತಡೆಗೆ ದೇವರು ಸಹಕಾರ ನೀಡುತ್ತಾನೆ, ಎಲ್ಲವೂ ಸರಿ ಆಗುತ್ತೆ ಎಂದರು. ಆದರೆ ಇಷ್ಟೆಲ್ಲಾ ಹೇಳಿದ ಸಚಿವ ರಮೇಶ್ ಜಾರಕಿಹೊಳಿ ಕಾರ್ಯಮದಲ್ಲಿ ತಾವೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಜನ ಖಂಡಿಸಿದ್ದಾರೆ.

ಕಾಮಗಾರಿ ಕುರಿತು ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಆಗಿರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಲು ಯತ್ನಿಸುತ್ತೇವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನ ಮಾಡಲಾಗುವುದು. ನಾರಾಯಣಪುರ ಬಲದಂಡೆ ದುರಸ್ಥಿ ಕಾಮಗಾರಿಯಲ್ಲಿ ಕಳಪೆ ಆಗಿರುವುದನ್ನು ಸಹಿಸುವುದಿಲ್ಲ. ಆರೋಪದ ಕುರಿತು ಸಮಗ್ರ ತನಿಖೆ ಮಾಡಿಸಲಾಗುವುದು. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿ ಬಗ್ಗೆಯೂ ಸಮಗ್ರ ತನಿಖೆ ಮಾಡಿಸಲಾಗುವುದು ಎಂದರು.

ರಾಯಚೂರು, ಕೊಪ್ಪಳ, ಯಾದಗಿರಿಯಲ್ಲಿ ಹಲವು ನೀರಾವರಿ ಯೋಜನೆ ಜಾರಿ ಮಾಡಲಾಗುವುದು. ಪ್ರತಾಪ್ ಗೌಡರನ್ನು ಗೆಲ್ಲಿಸಿದರೆ ನಾನು 5ಂ ಕಾಲುವೆ ಮಾಡಿಕೊಡುತ್ತೇನೆ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಪರಿಹಾರ ಮಾಡಲಾಗುವುದು. ಪ್ರತಾಪ್ ಗೌಡ ಗೆದ್ದರೆ ಸಚಿವರೂ ಆಗ್ತಾರೆ. ರಾಯಚೂರು ಉಸ್ತುವಾರಿ ಆಗ್ತಾರೆ. ಬಿಜೆಪಿ ಸರ್ಕಾರ ಬರುವುದಕ್ಕೆ ಪ್ರತಾಪ್ ಗೌಡ ಪಾಟೀಲ್‍ರ ಪಾತ್ರ ಮಹತ್ವದ್ದಾಗಿದೆ. ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಮಾಡಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *