– ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ
ಕಲಬುರಗಿ: ಕೊರೊನಾ ವೈರಸ್ ಎಂಬ ಮಹಾಮಾರಿ ರಾಜ್ಯವನ್ನು ಒಕ್ಕರಿಸಿ ರುದ್ರನರ್ತನ ತೋರುತ್ತಿದ್ದು, ಆಸ್ಪತ್ರೆಗಳ ಒಂದೊಂದೇ ಎಡವಟ್ಟುಗಳು ಬೆಳಕಿಗೆ ಬರುತ್ತಿದೆ. ಈ ಮಧ್ಯೆ ಇದೀಗ ಕಲಬುರಗಿ ನಗರದಲ್ಲಿ ಆರೋಗ್ಯ ಇಲಾಖೆ ಮಹಾ ಎಡವಟ್ಟೊಂದನ್ನು ಮಾಡಿದೆ.
ಹೌದು. 70 ವರ್ಷದ ವೃದ್ಧೆಯೊಬ್ಬರಿಗೆ ಕೊರೊನಾ ದೃಢವಾದರೂ ಅಂಬುಲೆನ್ಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯಲ್ಲೇ ಬಿಟ್ಟು ಹೋದ ಪ್ರಸಂಗ ಕಲಬುರಗಿ ನಗರದ ಅತ್ತರ್ ಕಂಪೌಂಡ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ವೃದ್ಧೆ ಮನೆಯ ಮೂರನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಅವರ ಕಾಲು ಮುರಿದಿದ್ದರಿಂದ ನಡೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಮತ್ತಿಬ್ಬರು ಮಹಿಳೆಯರು ಮಾತ್ರ ಇದ್ದಾರೆ. ಹೀಗಾಗಿ ಅವರಿಗೂ ವೃದ್ಧೆಯನ್ನು ಎತ್ತಿಕೊಂಡು ಬರಲು ಆಗಲಿಲ್ಲ. ಆದರೆ ಅಂಬುಲೆನ್ಸ್ ಸಿಬ್ಬಂದಿ ಮಾತ್ರ ನೀವೇ ಅವರನ್ನು ಕರೆತಂದು ಅಂಬುಲೆನ್ಸ್ ಒಳಗಡೆ ಕೂರಿಸಬೇಕು. ನೀವೇ ಕರೆದುಕೊಂಡು ಬಂದು ಕೂರಿಸಿದರೆ ಮಾತ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ಮಹಿಳೆಯರ ಬಳಿ ಹೇಳಿದ್ದಾರೆ. ಆದ್ರೆ ಮನೆಯಲ್ಲಿರುವ ಮಹಿಳೆಯರಿಗೆ ವೃದ್ಧೆಯನ್ನು ಎತ್ತಿಕೊಂಡು ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಂಬುಲೆನ್ಸ್ ಸಿಬ್ಬಂದಿ ಕೆಲಹೊತ್ತು ನಿಂತು ವಾಪಸ್ ಆಗಿದ್ದಾರೆ.
ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ.