-ಸಿಎಂ ಗಾದಿಯಿಂದ ಬಿಎಸ್‍ವೈ ಇಳಿಸುವ ತಂತ್ರದಲ್ಲಿರುವ ಶಾಸಕರು
-ಯಡಿಯೂರಪ್ಪರನ್ನ ಕೆಳಗಿಳಿಸುವ ಕೂಗು ಜೋರು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತು ಡ್ರಗ್ಸ್ ಕೇಸ್ ಬಿರುಗಾಳಿ ನಡುವೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುರ್ಚಿಗೆ ಕಂಟಕ ಎದುರಾಗಿರುವ ಬಗ್ಗೆ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎರಡು ಗುಂಪುಗಳಲ್ಲಿ ಲಿಂಗಾಯತ ಶಾಸಕರ ತಂಡ ಯಡಿಯೂರಪ್ಪ ಅವರನ್ನ ಕುರ್ಚಿಯಿಂದ ಇಳಿಸಲು ತಂತ್ರ ರೂಪಿಸಲಾಗಿದೆ. ಈ ಬಣಗಳು ಯಡಿಯೂರಪ್ಪನವರ ವಿರುದ್ಧದ ಬಂಡಾಯದ ಸಂದೇಶವನ್ನ ಹೈಕಮಾಂಡ್‍ಗೆ ರವಾನಿಸಿದೆ ಎನ್ನಲಾಗಿದ್ದು, ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದರ ಬಗ್ಗೆ ಶಾಸಕರು ತಲೆ ಕೆಡಿಸಿಕೊಂಡಿದ್ದಾರೆ. ಇತ್ತ ಯಡಿಯೂರಪ್ಪ ಅವರನ್ನ ಕೆಳಗಿಳಿಸಲು ಸ್ವಾಮೀಜಿಯೊಬ್ಬರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವಾಮೀಜಿ ಇತರ ಲಂಗಾಯತ ಸ್ವಾಮೀಜಿಗಳ ಮನವೊಲಿಕೆಗೆ ಮುಂದಾಗಿರುವ ಸುಳಿವು ಬಿಎಸ್‍ವೈ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ದೆಹಲಿಯಲ್ಲಿ ಸಭೆ: ಮಾಜಿ ಸಿಎಂ, ಸಚಿವ ಜಗದೀಶ್ ಶೆಟ್ಟರ್ ಕೆಲವು ದಿನಗಳ ಹಿಂದೆ ದೆಹಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರನ್ನ ಭೇಟಿಯಾಗಿ ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.