ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾಗೆ ತತ್ತರಿಸಿದ ಜನರಿಗೆ ಈಗ ಮತ್ತೆ ಮಳೆರಾಯನ ಆರ್ಭಟ ಸಿಡಿಲು ಬಡಿದಂತಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೆಲವೆಡೆ ಅನಾಹುತಗಳೂ ಸಂಭವಿಸಿವೆ.
ರಾಜ್ಯದಲ್ಲಿ ಕೊರೊನಾದ ಜೊತೆಗೆ ವರುಣನ ಆರ್ಭಟವೂ ಜೋರಾಗಿದೆ. ಕೋಲಾರದಲ್ಲಿ ಸುರಿದ ಭಾರೀ ಮಳೆಗೆ ರಸ್ತೆಯೆಲ್ಲಾ ಜಲಾವೃತವಾಗಿ ವಾಹನ ಸವಾರರು ಪರದಾಡಿದ್ರು. ಇತ್ತ ಗಡಿ ಜಿಲ್ಲೆ ಬೀದರ್‍ನಲ್ಲೂ ಧಾರಾಕಾರ ಮಳೆಯಾಗಿದೆ. ಭಾಲ್ಕಿ, ಬಸವಕಲ್ಯಾಣ, ಔರಾದ್ ಸೇರಿದಂತೆ ಹಲವೆಡೆ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಬ್ಯಾಡಗಿ ಸೇರಿದಂತೆ ವಿವಿಧ ಭಾಗದಲ್ಲಿ ಜೋರು ಮಳೆ ಆಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಲ್ಲೂ ವೃದ್ಧೆಗೆ ಕೊಡೆ ಹಿಡಿದು ಪೊಲೀಸ್ ಕಾನ್ಸ್ ಸ್ಟೇಬಲ್ ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಕಾನ್ಸ್ ಸ್ಟೇಬಲ್ ಮಾನವೀಯತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರದ ಮಳೆ ಮುಂದುವರಿದಿದೆ. ಕರಾವಳಿ ಭಾಗದ ಅಂಕೋಲ ಭಾಗದಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆಯ ಅಬ್ಬರಕ್ಕೆ ವಿದ್ಯುತ್ ಕಂಬ ಉರುಳಿ ಹಸುಗಳು ಸಾವನ್ನಪ್ಪಿವೆ. ಉಡುಪಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು. ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.