ಕೊರೊನಾ ಕಾಲರ್ ಟ್ಯೂನ್‍ಗೆ ಧ್ವನಿಯಾಗಿದ್ದು ಮಂಗ್ಳೂರು ಬೆಡಗಿ

Public TV
2 Min Read

ಮಂಗಳೂರು: ‘ನೋವೆಲ್ ಕೊರೊನಾ ವೈರಸ್ ಹರಡುದನ್ನು ತಡೆಗಟ್ಟಬಹುದಾಗಿದೆ. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಸ್ಯೂವಿನಿಂದ ನಿಮ್ಮ ಬಾಯಿ ಮುಚ್ಚಿ’. ಹೀಗಂತ ಕನ್ನಡಿಗರು ಕಾಲ್ ಮಾಡುವಾಗ ಬರುವ ಕನ್ನಡ ಕಾಲರ್ ಟ್ಯೂನ್ ನಾವು ನೀವೆಲ್ಲ ಕೇಳಿರುತ್ತೀವಿ, ಕೊರೊನಾ ವಕ್ಕರಿಸಿದ ಮೇಲೆ ಕೊರೊನಾಗಿಂತ ಜಾಸ್ತಿ ಕಾಡಿದ್ದು ಇದೇ ಕೊರೋನಾ ವಾಯ್ಸ್.

ಹೌದು. ಕೊರೊನಾ.. ಕೊರೊನಾ.. ಕೊರೊನಾ.. ವಿಶ್ವದೆಲ್ಲೆಡೆ ಅದೇ ಸುದ್ದಿ. ಯಾರೊಂದಿಗಾದರೂ ಕಾಲ್ ಮಾಡಿ ನೆಮ್ಮದಿಯಿಂದ ಮಾತಡೋಣ ಅಂದ್ರೂ, ಮೊದಲು ಬರೋದು ಕೂಡ ಕೊರೊನಾ ತಡೆಗಟ್ಟಿ ಎನ್ನುವ ಕಾಲರ್ ಟ್ಯೂನ್. ಹಲವು ಮಂದಿ ಇದ್ರಿಂದ ಕಿರಿಕಿರಿ ಅಂತ ಸಾಮಾಜಿಕ ಜಾಲತಾಣದಲ್ಲಿ ಬೇಸರ ಕೂಡ ವ್ಯಕ್ತಪಡಿಸಿದ ಉದಾಹರಣೆಗಳಿವೆ. ಆದರೆ ಎಲ್ಲರಿಗೂ ಇದರ ಹಿಂದಿನ ಧ್ವನಿ ಯಾರದ್ದು ಅಂತ ಕುತೂಹಲ ಕೂಡ ಇತ್ತು. ಆದ್ರೀಗ ಯಾರ ಧ್ವನಿ ಅಂತ ಗೊತ್ತಾಗಿದ್ದು, ಕಾಲರ್ ಟ್ಯೂನ್ ಧ್ವನಿ ನೀಡಿದ್ದು ಮತ್ಯಾರು ಅಲ್ಲ ಅವರೇ ನಮ್ಮ ಮಂಗಳೂರ್ ಹುಡುಗಿ, ಬಹುಮುಖ ಪ್ರತಿಭೆ ಮಂಗಳೂರಿನ ಡಾರೆಲ್ ಜೆಸಿಕಾ ಫೆರ್ನಾಂಡಿಸ್. ಮಂಗಳೂರಿನ ಪಡೀಲ್ ನಿವಾಸಿ ದಿವಂಗತ ವೆಲೇರಿಯನ್ ಫೆರ್ನಾಂಡಿಸ್ ಹಾಗೂ ಲವಿನಾ ಫೆರ್ನಾಂಡಿಸ್ ರವರ ಪುತ್ರಿ.

ಕನ್ನಡದಲ್ಲಿ ಒಟ್ಟು ಮೂರು ಹಂತದಲ್ಲಿ ಜಾಗೃತಿ ಧ್ವನಿ ಬಂದಿವೆ. ಅದರಲ್ಲಿ ಮೊದಲನೆಯದ್ದು, ಮಂಗಳೂರಿನ ಪಡೀಲ್ ಮೂಲದ ಡಾರೆಲ್ ಜೆಸಿಕಾ ಫೆರ್ನಾಂಡಿಸ್ ಅವರ ಧ್ವನಿಯಾಗಿದೆ. ಎಂಪಿಎಡ್ ಪದವಿ ಪಡೆದ ಇವರು ಸ್ವಲ್ಪ ಸಮಯ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ 2013ರಲ್ಲಿ ದೆಹಲಿಯ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಇವರ ಧ್ವನಿಯನ್ನು ಗುರುತಿಸಿದ ಶಾಲಾ ಸಂಚಾಲಕರಾಗಿದ್ದ ವಾಯ್ಸ್ ಓವರ್ ಆರ್ಟಿಸ್ಟ್, ಖ್ಯಾತ ಯಕ್ಷಗಾನ ಕಲಾವಿದ ಕೃಷ್ಣ ಭಟ್  ಅವರು, ಜೆಸಿಕಾ ಫೆರ್ನಾಂಡಿಸ್ ಅವರಿಗೆ ವಾಯ್ಸ್ ಓವರ್ ನೀಡಲು ಅವಕಾಶ ಮಾಡಿಕೊಟ್ಟರು.

ಡಾರೆಲ್ ಜೆಸಿಕಾ ಫೆರ್ನಾಂಡಿಸ್ ಅವರು ರೆಡಿಯೋ ಹಾಗೂ ಟಿವಿಗಳಲ್ಲಿ ಬರುವ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ್ದರು. ಹೀಗಾಗಿ ಇವರಿಗೆ ಕೊರೊನಾ ಜಾಗೃತಿಯ ಧ್ವನಿ ನೀಡುವ ಅವಕಾಶ ಒದಗಿ ಬಂದಿತ್ತು. ಪತಿ ಚಂಡೀಗಢದಲ್ಲಿ ಸೈನಿಕರಾಗಿರುವುದರಿಂದ ಜೆಸಿಂತಾ ಫೆರ್ನಾಂಡೀಸ್ ಕೂಡ ಸದ್ಯ ಚಂಡೀಗಢದಲ್ಲಿದ್ದಾರೆ.

ಇಷ್ಟು ದಿನ ಯಾರದಪ್ಪ ಈ ಧ್ವನಿ ಅಂತ ತಲೆ ಕೆರೆದುಕೊಳ್ಳುವವರಿಗೆ ಇದೀಗ ಉತ್ತರ ಸಿಕ್ಕಿದೆ. ಜಗತ್ತಿಗೆ ಬಾಧಿಸಿದ ಮಹಾಮಾರಿಯನ್ನು ಓಡಿಸಲು ಜಾಗೃತಿಯ ಸಂದೇಶ ಧ್ವನಿ ನೀಡಿದ್ದು,ನಮ್ಮ ಕರಾವಳಿಯ ಯುವತಿ ಅನ್ನೋದು ವಿಶೇಷ. ಇಷ್ಟೇ ಅಲ್ಲದೇ ಡಾರೆಲ್ ಜೆಸಿಕಾ 200ಕ್ಕೂ ಅಧಿಕ ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತಿಗೆ ಧ್ವನಿ ನೀಡಿದ್ದಾರೆ ಅನ್ನೋದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *