ಕೊರೊನಾ ಕಾಲದಲ್ಲಿ ಮಕ್ಕಳ ಮೇಲೆ ಶೋಷಣೆ – ಪಬ್ಲಿಕ್ ಟಿವಿ ಮೆಗಾ ಅಭಿಯಾನ

Public TV
4 Min Read

– ಆನ್‍ಲೈನ್ `ಶಿಕ್ಷೆ’ಣದದಿಂದ ಎಳೆಯ ಕಂದಮ್ಮಗಳ ಮನಸ್ಸುಗಳಿಗೆ ಘಾಸಿ
– ಖಾಸಗಿ ಲಾಬಿಗೆ ಮಣಿತಾ ಸರ್ಕಾರ
– ಪೋಷಕರು, ಶಿಕ್ಷಣ ತಜ್ಞರಿಂದ ಭಾರೀ ವಿರೋಧ

ಬೆಂಗಳೂರು: ಮಕ್ಕಳ ಕೈಗೆ ‘ಅವುಗಳನ್ನು’ ನೀಡಬಾರದು ಎಂದು ಪೋಷಕರು ಬಯಸಿದ್ದರೆ, ಇತ್ತ ವ್ಯವಸ್ಥೆಯ ಬಲವಂತವಾಗಿ ‘ಆ ವಸ್ತುಗಳನ್ನು’ ನೀಡುವಂತೆ ಪೋಷಕರ ಮೇಲೆಯೇ ಒತ್ತಡ ಹೇರಿದರೆ ಆ ವ್ಯವಸ್ಥೆಯನ್ನು ಯಾಕೆ ಒಪ್ಪಬೇಕು – ಕೋವಿಡ್ 19 ಸಮಯದಲ್ಲಿ ಈ ಈ ಗಂಭೀರ ಪ್ರಶ್ನೆ ಎದ್ದಿದ್ದು, ಈ ವ್ಯವಸ್ಥೆ ನಡೆಯುತ್ತಿದ್ದರೂ ಸರ್ಕಾರ ತನಗೂ ಇದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಒಂದು ಕಡೆ ಕೊರೊನಾ ಸಮಸ್ಯೆಯಾದರೆ ಮತ್ತೊಂದು ಕಡೆ ಆನ್‍ಲೈನ್ ಮೂಲಕ ತರಗತಿ ನಡೆಸುವ ಮೂಲಕ ಮಕ್ಕಳಿಗೆ ‘ಶಿಕ್ಷೆ’ಣೆ ನೀಡಲು ಮುಂದಾಗಿರುವುದು ಈಗ ಭಾರೀ ಟೀಕೆಗೆ ಗುರಿಯಾಗಿದೆ. ಕೋವಿಡ್ 19 ನಿಂದಾಗಿ ಈಗ ಶಾಲೆಗಳು ಬಂದ್ ಆಗಿದ್ದರೂ ಆನ್‍ಲೈನ್ ತರಗತಿ ನಡೆಯುತ್ತಿರುವುದು ಎಳೆಯ ಮಕ್ಕಳಿಗೆ ಭಾರೀ ಸಮಸ್ಯೆ ತಂದೊಡ್ಡಿದೆ.

 

ಪೋಷಕರಿಂದ ಭಾರೀ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಳೆಯ ಕಂದಮ್ಮಗಳ ಮೇಲೆ ಹೇರಲಾಗುತ್ತಿರುವ ಆನ್‍ಲೈನ್ ತರಗತಿಯ ವಿರುದ್ಧ ಮಹಾ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ಸಿನಿಮಾ ಕಲಾವಿರು ಸಾಥ್ ನೀಡಿದ್ದಾರೆ.

ಆನ್‍ಲೈನ್ ಕ್ಲಾಸ್ ಏನು? ಎತ್ತ?
1-5 ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ 9 ಗಂಟೆಯಿಂದ ಆನ್‍ಲೈನ್ ಕ್ಲಾಸ್ ಪ್ರಾರಂಭವಾದರೆ ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ರಿಂದಲೇ ಆನ್‍ಲೈನ್ ಕ್ಲಾಸ್ ಶುರುವಾಗುತ್ತಿದೆ. ಮಧ್ಯಾಹ್ನ 3 ರಿಂದ 4, 4 ರಿಂದ 5 ಗಂಟೆಗೆ ಮತ್ತೆ ತರಗತಿ ನಡೆಯುತ್ತಿದೆ.

ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಲ್ಯಾಪ್ ಟ್ಯಾಬ್, ಟ್ಯಾಬ್, ಕಂಪ್ಯೂಟರ್ ಪೈಕಿ ಒಂದು ವಸ್ತು ಇರಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಇಂಟರ್‍ನೆಟ್ ಸೌಲಭ್ಯ ಇರಬೇಕು. ಆನ್‍ಲೈನ್ ತರಗತಿ ಆರಂಭಕ್ಕೆ 10 ನಿಮಿಷ ಮೊದಲು ವಿದ್ಯಾರ್ಥಿಗೆ ಪಾಸ್‍ವರ್ಡ್ ರವಾನೆಯಾಗುತ್ತದೆ. ಆ ಪಾಸ್‍ವರ್ಡ್ ಮೂಲಕ ವಿದ್ಯಾರ್ಥಿ ಲಾಗಿನ್ ಆಗಿ ಪಾಠ ಕೇಳಬೇಕು.

ಶಿಕ್ಷೆ ಹೇಗೆ?
ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳ ಶೋಷಣೆಯಾಗುತ್ತಿದೆ. 1-5 ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಪಾಠ ಅರ್ಥ ಆಗುವುದಿಲ್ಲ. ಶಿಕ್ಷಕರು ಪಾಠ ಮಾಡೋದು ಬಹುತೇಕ ಮಕ್ಕಳಿಗೆ ಅರ್ಥವೇ ಆಗುತ್ತಿಲ್ಲ. ಈ ವಯಸ್ಸಿನ ಮಕ್ಕಳು ಆನ್‍ಕ್ಲಾಸ್‍ಗೆ ಗಮನ ನೀಡಲು ಸಾಧ್ಯವಿಲ್ಲ.ಆನ್‍ಲೈನ್ ಕ್ಲಾಸ್‍ನಲ್ಲಿ ಚಿತ್ರಗಳನ್ನು ತೋರಿಸಿದಾಗ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಸಿಗುತ್ತದೆ. ಉಳಿದ ವೇಳೆ ಆನ್‍ಲೈನ್ ಕ್ಲಾಸ್ ಎಂಬುದು ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್ ಆಟದ ವಸ್ತು. ಆನ್‍ಲೈನ್ ಪಾಠ ಪ್ರಾರಂಭ ಹೇಗೆ ಮಾಡ್ತಾರೆ ಅನ್ನೋದೆ ಮಕ್ಕಳಿಗೆ ಗೊತ್ತಿಲ್ಲ. ಪೋಷಕರು ಮಗುವಿನ ಪಕ್ಕ ಕುಳಿತು ಮೊಬೈಲ್, ಟ್ಯಾಬ್ ಆನ್ ಮಾಡಿಕೊಡಬೇಕು. ಪೋಷಕರು ಕ್ಲಾಸ್ ಕೇಳಿಸಿಕೊಂಡು ಹೇಳಿದರೆ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಬರುತ್ತದೆ.

ಆನ್‍ಲೈನ್ `ಶಿಕ್ಷೆ’ಣ ಬೇಕಾ..?
ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರ ಪ್ರಕಾರ ಈ ವಯಸ್ಸು ಸೂಕ್ಷ್ಮ ವಯಸ್ಸು. 10ರೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ಅಗತ್ಯವೇ ಇಲ್ಲ. ಆಟ ಆಡುವ ವಯಸ್ಸಿನ ಮಕ್ಕಳಿಗೆ ಇದು ಕಿರುಕುಳ ನೀಡಿದಂತಾಗುತ್ತದೆ. ಆನ್‍ಲೈನ್ ಪಾಠವನ್ನು ಗ್ರಹಿಸಲು ಮಕ್ಕಳಿಗೆ ಕಷ್ಟ ಆಗುತ್ತದೆ. ಶಾಲೆಯಲ್ಲಿ ಪ್ರತಿ ಮಗುವಿನ ಮೇಲೆ ಶಿಕ್ಷಕರು ಗಮನ ಕೊಡ್ತಾರೆ. ಆದರೆ ಆನ್‍ಲೈನ್‍ನಲ್ಲಿ ಇದು ಅಸಾಧ್ಯ. ಹೀಗಾಗಿ ಮಗುವಿಗೆ ಪಾಠವೇ ಅರ್ಥ ಆಗುವುದಿಲ್ಲ. ಇದು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತದೆ.

ಮಕ್ಕಳ ಮೇಲೆ ಆಗೋ ಪರಿಣಾಮ ಏನು?
ಆನ್‍ಲೈನ್ ಕಲಿಕೆಯಿಂದ ಅನೇಕ ಗೊಂದಲ, ಸಮಸ್ಯೆ ಸೃಷ್ಟಿಯಾಗಿದೆ. ಆನ್‍ಲೈನ್ ಕ್ಲಾಸ್‍ಗೆ ಇಂಟರ್‍ನೆಟ್ ಸೌಲಭ್ಯ ಬೇಕೆಬೇಕು. ಆನ್‍ಲೈನ್ ಕ್ಲಾಸ್ ವೇಳೆ ಮಕ್ಕಳು ಕೈ ತಪ್ಪಿ ಬೇರೆ ಲಿಂಕ್ ಒತ್ತುವ ಸಾಧ್ಯತೆಯಿದೆ. ಅಶ್ಲೀಲ ವಿಡಿಯೋ ಸೇರಿದಂತೆ ಇನ್ನಿತರ ಲಿಂಕ್ ಓಪನ್ ಆಗಬಹುದು. ಇವು ಮಕ್ಕಳನ್ನ ಬೇರೆ ಹಾದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಮೊಬೈಲ್ ಗೇಮ್ ಗಳಿಗೆ ಮಕ್ಕಳು ಅಡಿಕ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಮೊಬೈಲ್, ಟ್ಯಾಬ್, ಲ್ಯಾಪ್‍ನಂತಹ ಪರಿಕರಗಳಿಗೆ ಅಡಿಕ್ಟ್ ಆಗೋ ಸಾಧ್ಯತೆ ಹೆಚ್ಚಿದೆ.

ಆರೋಗ್ಯದ ಮೇಲೆ ಏನಾಗುತ್ತೆ?
ಪದೇ ಪದೇ ಮಗು ಮೊಬೈಲ್, ಕಂಪ್ಯೂಟರ್ ನೋಡ್ತಿದ್ರೆ ಕಣ್ಣಿನ ಮೇಲೆ ಪರಿಣಾಮ ಬೀಳುತ್ತದೆ. ಆನ್‍ಲೈನ್ ಕ್ಲಾಸ್ ಒತ್ತಡದಿಂದ ಮಕ್ಕಳ ಮೆದುಳಿನ ಮೇಲು ಅಡ್ಡ ಪರಿಣಾಮವಾಗುತ್ತದೆ. ಆನ್‍ಲೈನ್ ಪಾಠ ಅರ್ಥ ಆಗದೇ, ಮಕ್ಕಳಿಗೆ ಕೋಪ, ಆವೇಶ, ಸಿಟ್ಟು ಬರಬಹುದು. ಪುಟ್ಟ ಪುಟ್ಟ ಮಕ್ಕಳು ಮಾನಸಿಕ ಖಿನ್ನತೆಗೆ ತುತ್ತಾಗಬಹುದು. ಪೋಷಕರು, ಶಿಕ್ಷರ ಮಾತು ಕೇಳದೇ ವಿಚಿತ್ರವಾಗಿ ವರ್ತಿಸಬಹುದು.

ಪೋಷಕರಿಗೆ ಆನ್‍ಲೈನ್ `ಶಿಕ್ಷೆ’..!
ಆನ್‍ಲೈನ್ ಕ್ಲಾಸ್‍ಗಳಿಂದ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ, ಪೋಷಕರಿಗೂ ತೊಂದರೆ ಆರಂಭವಾಗಿದೆ. ಇರುವ ಎಲ್ಲಾ ಕೆಲಸ ಕಾರ್ಯ ಬಿಟ್ಟು ಮಕ್ಕಳ ಮುಂದೆ ಕ್ಲಾಸ್ ಮುಗಿಯುವರೆಗೂ ಇರಬೇಕು. ಮಕ್ಕಳು ಮೊಬೈಲ್‍ನಲ್ಲಿ ಏನೇನು ಓಪನ್ ಮಾಡ್ತಾರೋ ಎಂಬ ಭಯ. ಆನ್‍ಲೈನ್ ಕ್ಲಾಸ್ ವೇಲೆ ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿಯೂ ಎರಡೆರಡು, ಮೂರುಮೂರು ಮೊಬೈಲ್ ಇರಲ್ಲ (ಇದ್ದರೂ ಇಂಟರ್ನೆಟ್ ಸೌಲಭ್ಯ ಎಲ್ಲಾ ಮೊಬೈಲ್‍ಗಳಿಗೂ ಇರಲ್ಲ).

ಈ ಹಿಂದೆ ಆಫೀಸಿಗೆ ತೆರಳಿದ್ದಾಗ ಮನೆಯಲ್ಲಿ ಮಕ್ಕಳನ್ನು ಹಿರಿಯರು ನೋಡುತ್ತಿದ್ದರು. ಆದರೆ ಈಗ ಅವರಿಗೆ ಕಂಪ್ಯೂಟರ್/ ಮೊಬೈಲ್ ಆಪರೇಟಿಂಗ್ ಮಾಡಲು ಬರುವುದಿಲ್ಲ. ಹೀಗಾಗಿ ಪೋಷಕರೇ ಮನೆಯಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕಂಪನಿ/ ಕಾರ್ಖಾನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಫೀಸ್‍ನಲ್ಲಿ/ಕಾರ್ಖಾನೆಗಳಲ್ಲಿ ಲೇಟಾದ್ರೆ ಅಲ್ಲೂ ಬೈಸಿಕೊಳ್ಳಬೇಕು. ಆನ್‍ಲೈನ್ ಕ್ಲಾಸ್ ಹೆಸರೇಳಿ ಪೋಷಕರಿಂದ ದುಬಾರಿ ಶುಲ್ಕ ವಸೂಲಿಯಾಗುತ್ತಿದೆ. ಟ್ಯಾಬ್, ಲ್ಯಾಪ್‍ಟಾಪ್ ತೆಗೆದುಕೊಳ್ಳಿ ಅಂತ ಆಡಳಿತ ಮಂಡಳಿಗಳಿಂದ ಒತ್ತಡ. ಅವಿದ್ಯಾವಂತ ತಂದೆ-ತಾಯಿಯರಿಗೆ ಆನ್‍ಲೈನ್ ಶಿಕ್ಷಣ ಎಂಬುದು ನರಕಯಾತನೆಯಾಗಿದೆ.

 

ಖಾಸಗಿ ಲಾಬಿಗೆ ಮಣಿತಾ ಸರ್ಕಾರ?
ಆನ್‍ಲೈನ್ ಕ್ಲಾಸ್ ನಡೆಸಲು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿಲ್ಲ. ಕ್ರಮ ಕೈಗೊಳ್ಳುತ್ತೇವೆ ಎಂದು ಒಂದು ಕಡೆ ಸರ್ಕಾರ ಹೇಳುತ್ತಿದೆ. ಆದರೆ ಇನ್ನೊಂದು ಕಡೆ ಎಲ್ಲವನ್ನು ನೋಡಿಕೊಂಡು ಸುಮ್ಮನೆ ಕುಳಿತಿದೆ. ಈ ಮೂಲಕ ಖಾಸಗಿ ಲಾಬಿಗೆ ಸರ್ಕಾರ ಮಣಿತಾ ಎಂಬ ಪ್ರಶ್ನೆ ಎದ್ದಿದೆ. ಲಾಕ್‍ಡೌನ್ ಹೊತ್ತಲ್ಲೂ ಹಣ ಮಾಡೋ ಉದ್ದೇಶಕ್ಕಾಗಿ ಆನ್‍ಲೈನ್ ತರಗತಿ ಮಾಡುತ್ತಿದೆ. ರಾಜಾರೋಷವಾಗಿ ಆನ್‍ಲೈನ್ ಶಿಕ್ಷಣ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೆಲ್ಲ ನೋಡಿದರೆ ಒಳಗೊಳಗೆ ಖಾಸಗಿ ಶಾಲೆಗಳ ಜೊತೆ ಸರ್ಕಾರ ಸಹ ಶಾಮೀಲಾಗಿದ್ಯ ಎಂಬ ಪ್ರಶ್ನೆ ಎದ್ದಿದೆ ಎಂದು ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *