ಕೊರೊನಾ ಕಂಟ್ರೋಲ್‍ಗೆ ಕೇಜ್ರಿವಾಲ್ ಸರ್ಕಾರದ ಸಪ್ತ ಸೂತ್ರಗಳು

Public TV
3 Min Read

ನವದೆಹಲಿ: ಕೊರೊನಾ ವಿಚಾರದಲ್ಲಿ ದೇಶದಲ್ಲಿ ಮುಂಬೈ ಬಿಟ್ಟರೆ ಅತಿ ಹೆಚ್ಚು ಆತಂಕ ಹುಟ್ಟಿಸಿದ್ದ ನಗರ ರಾಷ್ಟ್ರ ರಾಜಧಾನಿ ದೆಹಲಿ. ಪ್ರತಿ ದಿನಕ್ಕೆ 4 ರಿಂದ 5 ಸಾವಿರ ಪ್ರಕರಣಗಳು ಕಂಡು ರಾಜಧಾನಿ ಜನರು ಬೆಸ್ತು ಬಿದ್ದಿದ್ದರು. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಪ್ತ ಸೂತ್ರಕ್ಕೆ ಕೊರೊನಾ ಸೈಲೆಂಟ್ ಆಗಿದ್ದು, ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ ಗುಣಮುಖ ಆಗುತ್ತಿರುವವರ ಪ್ರಮಾಣ ಕೂಡಾ ಸಾಕಷ್ಟು ಹೆಚ್ಚಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ, ಕೊರೊನಾ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. 1.13 ಲಕ್ಷ ಸೋಂಕಿತರಿರುವ ದೆಹಲಿಯಲ್ಲಿ ಕಳೆದೊಂದು ವಾರದ ಹಿಂದೆ ಪ್ರತಿ ದಿನಕ್ಕೆ 4 ರಿಂದ 5 ಸಾವಿರ ಕೇಸುಗಳು ಪತ್ತೆಯಾಗುತ್ತಿದ್ದವು. ಪುಟ್ಟ ರಾಜ್ಯದ ಗಲ್ಲಿ, ಬೀದಿ, ಮೊಹಲ್ಲಾಗಳಲ್ಲಿ ಕೊರೊನಾ ಆರ್ಭಟಿಸುತ್ತಿತ್ತು. ಸಮುದಾಯಕ್ಕೆ ಸೋಂಕು ಹಬ್ಬಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯಂದ್ರ ಜೈನ್ ಒಪ್ಪಿಕೊಂಡಿದ್ದರು. ಆದರೆ ಈ ಸೋಂಕನ್ನು ನಿಯಂತ್ರಕ್ಕೆ ತರುವಲ್ಲಿ ಕೇಜ್ರಿವಾಲ್ ಸರ್ಕಾರ ಯಶಸ್ವಿಯಾಗಿದೆ. ಏಳು ಸೂತ್ರಗಳನ್ನು ನಿರಂತರವಾಗಿ ಅನುಷ್ಠಾನಕ್ಕೆ ತರುವ ಮೂಲಕ ಸೊಂಕು ಹರಡುವಿಕೆಯನ್ನು 1000-1200ಕ್ಕೆ ಇಳಿಸಿದ್ದಾರೆ.

ಕೇಜ್ರಿ ಸರ್ಕಾರದ ಸಪ್ತ ಸೂತ್ರಗಳು:
1. ಸೋಂಕಿತರ ಮನೆ ಪ್ರತ್ಯೇಕತೆ: ಕೊರೊನಾ ಸೋಂಕು ವ್ಯಕ್ತಿಯಲ್ಲಿ ಕಾಣಿಸಿಕೊಂಡ ಬೆನ್ನಲೆ ಅವರ ಮನೆಯನ್ನು ಪ್ರತ್ಯೇಲಿಸಲಾಗುತ್ತಿತ್ತು. ಅಲ್ಲದೇ ಆ ಮನೆಯ ಇತರೆ ಮಳಿಗೆಯಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗುತ್ತಿತ್ತು. ಮತ್ತು ಸೋಂಕಿತ ವ್ಯಕ್ತಿ, ಆತನ ಮನೆಯವರಿಂದ ಸಂಪರ್ಕ ತಡೆ ಮಾಡಲಾಗುತ್ತಿತ್ತು.

2. ಆಕ್ರಮಣಕಾರಿ ಪರೀಕ್ಷೆ: ದೆಹಲಿಯಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದ ಅನುಮಾನ ಬಂದ ಬೆನ್ನಲೆ ಕೇಜ್ರಿವಾಲ್ ಸರ್ಕಾರ ಕೇಂದ್ರ ಸರ್ಕಾರದ ನೆರವು ಪಡೆದು ಪ್ರತಿ ನಿತ್ಯ 20-24 ಸಾವಿರ ಟೆಸ್ಟ್ ಗಳನ್ನು ನಡೆಸಿತು. ದೆಹಲಿಯಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 10,500 ಮಂದಿಯನ್ನು ಪರೀಕ್ಷಿಸಲಾಗಿದೆ. ಮುಖ್ಯವಾಗಿ ಹಾಟ್ ಸ್ಪಾಟ್ ಹಾಗೂ ಕಂಟೈನ್ಮೆಂಟ್ ಝೋನ್ ಗಳನ್ನು ಟಾರ್ಗೆಟ್ ಮಾಡಲಾಗಿತ್ತು.

3. ಹಾಸಿಗೆಗಳ ಹೆಚ್ಚಳ: ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರೆತೆ ನೀಗಿಸುವ ಕೆಲಸಕ್ಕೆ ಮುಂದಾಯಿತು. ದೆಹಲಿಯ ಸರ್ಕಾರ ಆಸ್ಪತ್ರೆಗಳಲ್ಲಿ 700 ಬೆಡ್ ಗಳು ಮಾತ್ರ ಇದ್ದವು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.40 ಬೆಡ್ ಗಳನ್ನು ಪಡೆದುಕೊಂಡು ಈ ಸಂಖ್ಯೆಯನ್ನು 5 ಸಾವಿರಕ್ಕೆ ಹೆಚ್ಚಿಸಿದರು. ಈಗ 10,100 ಬೆಡ್ ಕೋವಿಡ್ ಕೇರ್ ನಿರ್ಮಾಣ ಮಾಡಿದ್ದು, ಬೆಡ್‍ಗಳ ಮಾಹಿತಿಗಾಗಿ ಮೊಬೈಲ್ ಆ್ಯಪ್ ತಯಾರಿಸಲಾಗಿದೆ. ಜನರು ಬೆಡ್ ಖಾಲಿ ಇರುವ ಆಸ್ಪತ್ರೆಗೆ ನೇರವಾಗಿ ತೆರಳಿ ದಾಖಲಾಗಬಹುದು.

4. ಸೋಂಕಿತರಿಗೆ ವೈದ್ಯರಿಂದ ಸಮಾಲೋಚನೆ: ದೆಹಲಿಯಲ್ಲಿ 1.13 ಲಕ್ಷ ಸೋಂಕಿತರ ಪೈಕಿ 80% ಮಂದಿ ರೋಗದ ಲಕ್ಷಣಗಳಿಲ್ಲ ರೋಗಿಗಳಾಗಿದ್ದರು. ಇವರಿಗೆ ದೇಶದಲ್ಲಿ ಮೊದಲು ಮನೆಯಲ್ಲಿ ಚಿಕಿತ್ಸೆ ನೀಡುವ ನಿರ್ಧಾರ ದೆಹಲಿ ಸರ್ಕಾರ ತೆಗೆದುಕೊಂಡಿತು. ದಿನಕ್ಕೆ ಎರಡು ಬಾರಿ ವೈದ್ಯಕೀಯ ಸಿಬ್ಬಂದಿ ಕರೆ ಮಾಡಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ತುರ್ತು ಸಮಯಕ್ಕೆ ಅವರನ್ನು ಆಸ್ಪತ್ರೆ ಸೇರಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ.

5. ರೋಗಿಗಳಿಗೆ ಆಕ್ಸಿ ಮೀಟರ್: ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಸರ್ಕಾರ ಉಚಿತವಾಗಿ ಆಕ್ಸಿ ಮೀಟರ್ ಅನ್ನು ನೀಡಿದೆ. ಪ್ರತಿದಿನ ಎರಡು ಗಂಟೆಗೊಮ್ಮೆ ತಮ್ಮ ಆಕ್ಸಿಜನ್ ಮಟ್ಟವನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಆರೋಗ್ಯದಲ್ಲಿ ಏರುಪೇರಾದ್ರೆ ವೈದ್ಯರ ಸಂಪರ್ಕಿಸಲು ಸೂಚಿಸಿತ್ತು. ದೆಹಲಿ ಸರ್ಕಾರ ಇದಕ್ಕಾಗಿ 59,600 ಆಕ್ಸಿ ಮೀಟರ್ ಗಳನ್ನು ಖರೀದಿಸಿದ್ದು, ಅದರಲ್ಲಿ 58,974 ಅನ್ನು ಪ್ರತಿದಿನ ಬಳಸಲಾಗುತ್ತಿದೆ. ಇದಲ್ಲದೆ ಸರ್ಕಾರವು 2,750 ಆಮ್ಲಜನಕ ಸಾಂದ್ರಕಗಳನ್ನು ಸಹ ಖರೀದಿಸಿದೆ.

6. ಆಂಬುಲೆನ್ಸ್ ಗಳ ಹೆಚ್ಚಳ: ಕೊರೊನಾ ಮುಂಚೆ ಸರ್ಕಾರದ ಬಳಿ 134 ಆಂಬುಲೆನ್ಸ್ ಗಳಿದ್ದವು ಇದನ್ನು ನಿಭಾಯಿಸಲು ವಾರ್ ರೂಂ ನಿರ್ಮಿಸಲಾಗಿದೆ. ಇಲ್ಲಿ ಅವಶ್ಯಕತೆ ಅನುಸಾರ ಆಂಬುಲೆನ್ಸ್ ಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಈಗ ಆಂಬುಲೆನ್ಸ್ ಗಳ ಸಂಖ್ಯೆ 602ಕ್ಕೇರಿದೆ. ಇಲ್ಲಿ ಖಾಸಗಿ ಆಂಬುಲೆನ್ಸ್ ಗಳು, ಕ್ಯಾಬ್ ಗಳು ಹಾಗೂ ಇತರೆ ವಾಹನಗಳನ್ನು ಬಳಸಿಕೊಳ್ಳಲಾಗಿದೆ.

7. ಪ್ಲಾಸ್ಲಾ ಚಿಕಿತ್ಸೆ: ದೆಹಲಿ ಮಟ್ಟದಲ್ಲಿ ಪ್ಲಾಸ್ಮಾ ಚಿಕಿತ್ಸೆ ವರದಾನವಾಗಿದೆ. ದೆಹಲಿಯಲ್ಲಿ ನಡೆದ ಬಹುತೇಕ ಪ್ಲಾಸ್ಮ ಪ್ರಯೋಗಗಳು ಯಶಸ್ವಿಯಾಗಿದೆ. ಇದಕ್ಕಾಗಿ ದೆಹಲಿ ಸರ್ಕಾರ ದೇಶದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದೆ. ಈವರೆಗೂ 29 ಮಂದಿ ಪ್ಲಾಸ್ಮಾದಿಂದ ಸಾವಿನ ಅಂಚಿನಿಂದ ಹೊರ ಬಂದಿದ್ದಾರೆ.

ದೆಹಲಿ ಸರ್ಕಾರ ವ್ಯವಸ್ಥೆ ಕಾರ್ಯ ನಿರ್ವಹಣೆಯಿಂದ ದೆಹಲಿಯಲ್ಲಿ ಗುಣಮುಖ ಗೊಳ್ಳುವವರ ಪ್ರಮಾಣ 77.26% ಕ್ಕೆ ಏರಿದೆ. ದೆಹಲಿಯಲ್ಲಿ ಸದ್ಯ 1,13,740 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 91,312 ಮಂದಿ ಗುಣಮುಖವಾಗಿದ್ದಾರೆ. ದೆಹಲಿಯಲ್ಲಿ ಸದ್ಯ 19 ಸಾವಿರ ಆಕ್ಟಿವ್ ಕೇಸ್ ಗಳಿದೆ. ಪ್ರತಿನಿತ್ಯ ಕಾಣಿಸಿಕೊಳ್ಳುತ್ತದ್ದ ಸೋಂಕಿತರ ಪ್ರಮಾಣ 1000-1200 ಕ್ಕೆ ಇಳಿದಿದ್ದು ಸಾವುಗಳ ಮೇಲೆಯೂ ದೆಹಲಿ ಸರ್ಕಾರ ಹಿಡಿತ ಸಾಧಿಸುತ್ತಾ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *