ಕೊರೊನಾ ಎಫೆಕ್ಟ್- ವೇಶ್ಯಾವಾಟಿಕೆ ಬಿಟ್ಟು ಪೇಟಿಂಗ್, ಕರಕುಶಲ ಕೆಲಸ ಆರಂಭಿಸಿದ ಕಾರ್ಯಕರ್ತೆಯರು

Public TV
2 Min Read

ನವದೆಹಲಿ: ಕೊರೊನಾ ಹಿನ್ನೆಲೆ ವೇಶ್ಯಾವಾಟಿಕೆ ಸ್ಥಗಿತಗೊಂಡಿರುವುದರಿಂದ ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದು, ಬದುಕು ಕಟ್ಟಿಕೊಳ್ಳಲು ಇದೀಗ ಪರ್ಯಾಯವಾಗಿ ಜೀವನೋಪಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪೇಟಿಂಗ್, ಕರಕುಶಲ ಕೆಲಸ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರ ಈ ಕಾರ್ಯಕ್ಕೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ(ಡಿಎಸ್‍ಎಲ್‍ಎ), ದೆಹಲಿ ಪೊಲೀಸ್ ಹಾಗೂ ಎನ್‍ಜಿಒ ನೈನಾ ಆ್ಯಕ್ಟಿವಿಟಿ ಎಜುಕೇಷನಲ್ ಸೊಸೈಟಿ ಜಂಟಿಯಾಗಿ ‘ಹುನಾರ್ ಜ್ಯೋತಿ’ ಮೂಲಕ ಸಹಾಯ ಮಾಡುತ್ತಿವೆ. ಈ ಕಾರ್ಯಕ್ರಮದ ಮೂಲಕ ಪೇಪರ್ ಬ್ಯಾಗ್, ಬಣ್ಣ ಬಣ್ಣದ ಮಣ್ಣಿನ ದೀಪ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಮಾಡುತ್ತಿದ್ದಾರೆ.

ಲೈಂಗಿಕ ಕಾರ್ಯಕರ್ತೆಯಾಗಿದ್ದ 35 ವರ್ಷದ ಕುಸುಮಾ(ಹೆಸರು ಬದಲಿಸಲಾಗಿದೆ) ಈ ಕುರಿತು ಮಾಹಿತಿ ನೀಡಿದ್ದು, ನಾನು 12 ವರ್ಷಗಳಿಂದ ಈ ಕೆಲಸವನ್ನು ಬಿಡಬೇಕು ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ವೇಶ್ಯಾವಾಟಿಕೆ ತ್ಯಜಿಸಿ ಈ ಕಾರ್ಯಕ್ರಮದ ಮೂಲಕ ವಿವಿಧ ಚಟುವಟಿಕೆಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮೊದಲ ಮೂರು ದಿನ ಲೈಂಗಿಕ ಕಾರ್ಯಕರ್ತೆಯರಿಗೆ ಬಣ್ಣ ದೀಪ ಹಾಗೂ ಪೇಪರ್ ಪ್ಯಾಕೆಟ್ ಮಾಡುವುದು ಹೇಗೆ ಎಂಬುದನ್ನು ಕಲಿಸಲಾಗಿದೆ. ಮುಂದಿನ ಕೆಲವು ದಿನಗಳು ಹಾಗೂ ವಾರಗಳಲ್ಲಿ ಊದುಬತ್ತಿ, ಕೀ ರಿಂಗ್ ಹಾಗೂ ಬಟ್ಟೆ ಕೆಲಸ ಮಾಡುವುದರ ಕುರಿತು ಅವರಿಗೆ ಹೇಳಿಕೊಡಲಾಗುವುದು. ಕೊರೊನಾ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಂಡು ವೇಶ್ಯಾವಾಟಿಕೆಯಿಂದ ಹೊರ ಬರಲು ಅವರು ಯತ್ನಿಸುತ್ತಿದ್ದಾರೆ ಎಂದು ಡಿಸಿಪಿ ಸಂಜಯ್ ಭಟಿಯಾ ತಿಳಿಸಿದರು.

ಕೊರೊನಾ ತಗುಲುತ್ತದೆ ಎಂಬ ಭಯದಿಂದ ಗ್ರಾಹಕರು ಬರುತ್ತಿಲ್ಲ. ಮೊದಲು ಕನಿಷ್ಠ 5-6 ಗ್ರಾಹಕರು ಬರುತ್ತಿದ್ದರು. ಈಗ ಕೇವಲ ಇಬ್ಬರು ಮಾತ್ರ ಬರುತ್ತಿದ್ದಾರೆ. ಈ ಇಬ್ಬರು ನೀಡುವ ಹಣದಿಂದ ಜೀವನ ಸಾಗಿವುಸು ಕಷ್ಟವಾಗಿತ್ತು. ಹೀಗಾಗಿ ಈ ಸಾಂಕ್ರಾಮಿಕ ರೋಗದ ನಡುವೆ ವೇಶ್ಯಾವಾಟಿಕೆ ಸಾಧ್ಯವಿಲ್ಲ ಎಂದು ಅರಿವಾಗಿ ಹಣ ಸಂಪಾದಿಸುವ ಕಲೆಯನ್ನು ಕಲಿಯಲು ನಿರ್ಧರಿಸಿದೆ ಎಂದು ಜಿಬಿ ರಸ್ತೆಯ ಲೈಂಗಿಕ ಕಾರ್ಯರ್ತೆ ತಿಳಿಸಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರ ಇಚ್ಛಾಶಕ್ತಿಯನ್ನು ಮನಗಂಡ ಪೊಲೀಸರು, ಈ ಮಹಿಳೆಯರಿಗೆ ತರಬೇತಿ ನೀಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಎನ್‍ಎಇಎಸ್ ಎಂಬ ಎನ್‍ಜಿಒ ಸಂಸ್ಥೆ ಪೇಪರ್ ಬ್ಯಾಗ್ ಹಾಗೂ ಮಣ್ಣಿನ ದೀಪಗಳನ್ನು ಮಾಡಲು ಮಹಿಳೆಯರಿಗೆ ಕಚ್ಚಾ ವಸ್ತುಗಳನ್ನು ಕೊಡುತ್ತದೆ. ಇದರ ಮಧ್ಯೆ ಡಿಎಸ್‍ಎಲ್‍ಎ ಮಹಿಳೆಯರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದೆ.

ಕೊರೊನಾ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ದುಃಸ್ಥಿತಿ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳು ಮಹಿಳೆಯರಿಂದ ಯಾವುದೇ ಗುರುತಿನ ಚೀಟಿ ಪಡೆಯದೆ ಪಡಿತರ ನೀಡುವಂತೆ ನಿರ್ದೇಶಿಸಿತ್ತು. ಇದೀಗ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *