ಕೊರೊನಾ ಎಫೆಕ್ಟ್: ಬೀದಿಗೆ ಬಿತ್ತು ಬಸ್ ನಿಲ್ದಾಣ ಶುಚಿಗೊಳಿಸ್ತಿದ್ದ ವೃದ್ಧ ದಂಪತಿ ಬದುಕು

Public TV
1 Min Read

ಮಡಿಕೇರಿ: ಇದ್ದಕ್ಕಿದ್ದಂತೆ ಬಂದ ಕೊರೊನಾ ಮಹಾಮಾರಿ ಬಸ್ ನಿಲ್ದಾಣವನ್ನು ಸ್ವಚ್ಚತೆ ಮಾಡುತ್ತಿದ್ದ ಕುಟುಂಬದ ಕೂಲಿಯನ್ನೇ ಕಿತ್ತುಕೊಂಡಿತು. ಬದುಕಿಡೀ ಬಸ್ ನಿಲ್ದಾಣವನ್ನೇ ಸ್ವಚ್ಛತೆ ಮಾಡಿದ್ದ ಈ ವೃದ್ಧ ಕುಟುಂಬಕ್ಕೆ ನಿಲ್ಲೋದಕ್ಕೆ ಸೂರು ಇಲ್ಲದೆ ಬೀದಿಗೆ ಬಿದ್ದಿದೆ.

ಹೌದು. ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಸ್ವಚ್ಚತಾ ಕಾರ್ಮಿಕರಾಗಿ ಈ ವೃದ್ಧ ದಂಪತಿ ದುಡಿಯುತ್ತಿದ್ದರು. ಆದರೆ ಕೊರೊನಾ ಮಹಾಮಾರಿ ಲಾಕ್‍ಡೌನ್ ಮೂಲಕ ಈ ಸ್ವಚ್ಛತಾ ಕಾರ್ಮಿಕರ ಕೆಲಸವನ್ನೂ ಕಿತ್ತುಕೊಂಡಿದೆ.

ಇದೀಗ ಅತ್ತ ಕೂಲಿಯೂ ಇಲ್ಲದೆ, ಇತ್ತ ಸೂರು ಇಲ್ಲದೆ ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ ಬದುಕು ದೂಡುತ್ತಿತ್ತು. ಬಸ್ಸಿನಿಂದ ಒಮ್ಮೆ ಬಿದ್ದು ಸೊಂಟ ಮುರಿದುಕೊಂಡಿದ್ದ ವೃದ್ಧೆ ಜಯಮ್ಮನಿಗೆ ಸದ್ಯ ತೆವಳುವುದಕ್ಕೂ ಆಗುವುದಿಲ್ಲ. ಹೀಗಾಗಿ ಗುಡಿಸಲು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಕಣ್ಣು ಕಾಣದ ಪತಿ ಚಿಕ್ಕ, ತನ್ನ ಪತ್ನಿಯ ಸ್ಥಿತಿ ನೋಡಿ ಕಣ್ಣೀರುಡುತ್ತಿದ್ದಾರೆ.

ದಿಕ್ಕು ದೆಸೆಯಿಲ್ಲದ ಈ ವೃದ್ಧ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕಾದ ಈ ಜೀವಗಳು ಇದುವರೆಗೆ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಾ, ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ ಹೇಗೋ ಕಾಲ ಕಳೆಯುತ್ತಿದ್ದವು. ಆದರೆ ಜಾಗದ ಮಾಲೀಕ ಆ ಗುಡಿಸಲುಗಳನ್ನು ಕಿತ್ತು ಇಡೀ ನಿವೇಶನವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ವೃದ್ಧ ಕುಟುಂಬ ಬೀದಿಗೆ ಬಿದ್ದಿದೆ.

ಈ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಬಾರ್ ಮಾಲೀಕ ಪ್ರತೀ ದಿನ ಇವರಿಗೆ ಊಟ ತಿಂಡಿ ಪೂರೈಸುತ್ತಿದ್ದರು. ಆದರೆ ಇದೀಗ ಖಾಸಗಿ ಜಾಗದ ಮಾಲೀಕ ಈ ಗುಡಿಸಲುಗಳನ್ನು ಕೀಳಿಸಿ ಜಾಗವನ್ನು ಸ್ವಚ್ಛಗೊಳಿಸಲು ಮುಂದಾಗಿರುವುದರಿಂದ ವೃದ್ಧ ದಂಪತಿ ಪಾಲಿಗೆ ನಿಲ್ಲುವುದಕ್ಕೂ ಸೂರು ಇಲ್ಲದಂತಾಗಿದೆ. ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗುಡಿಸಲು ಬಿಟ್ಟು ಎಲ್ಲಿಗೆ ಹೋಗೋದೆಂದು ದಂಪತಿ ಕಣ್ಣೀರು ಸುರಿಸುತ್ತಿದ್ದಾರೆ.

ಈ ಸ್ಥಿತಿಯನ್ನು ಕಂಡರೆ ಎಂಥವರಿಗೂ ಕರುಳು ಹಿಂಡುತ್ತದೆ. ಹೀಗಾಗಿ ಇದೂವರೆಗೆ ಊಟ ತಿಂಡಿ ಪೂರೈಸುತ್ತಿದ್ದ ಬಾರ್ ಮಾಲೀಕ, ಯಾರಾದರೂ ಸಹಾಯ ಮಾಡಿ ಪ್ಲೀಸ್. ಇವರನ್ನು ಕನಿಷ್ಠ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸೋಣ ಎಂದು ಸಹಾಯ ಹಸ್ತ ಚಾಚಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *