ಕೊರೊನಾ ಎಫೆಕ್ಟ್: ಕುಂಚ ಹಿಡಿಯುವ ಕೈಯಲ್ಲಿ ಗಾರೆ ಕರ್ಣಿ

Public TV
2 Min Read

– ಗಾರೆ ಕೆಲಸಗಾರನಾದ ಡ್ರಾಯಿಂಗ್ ಟೀಚರ್!

ಚಾಮರಾಜನಗರ: ಕುಂಚ ಹಿಡಿದು ಡ್ರಾಯಿಂಗ್ ಹೇಳಿಕೊಡುತ್ತಿದ್ದ ಶಿಕ್ಷಕ ಕೊರೊನಾ ಸೋಂಕಿನಿಂದ ಗಾರೆ ಕೆಲಸ ಶುರು ಮಾಡಿರುವ ಘಟನೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ.

ಕೊರೊನಾ ಜನರಿಗೆ ತಂದಿರುವ ಸಂಕಷ್ಟ ಅಷ್ಟಿಷ್ಟಲ್ಲ. ಚೀನಿ ವೈರಸ್ ಮಹಾಮಾರಿ ಸೋಂಕಿನಿಂದ ಬಹುತೇಕರು ತತ್ತರಿಸಿ ಹೋಗಿದ್ದಾರೆ. ಖಾಸಗಿ ಶಾಲೆ ಶಿಕ್ಷಕರಂತೂ ವೃತ್ತಿಯನ್ನು ಬಿಟ್ಟು ಜೀವನ ನಿರ್ವಹಣೆಗೆ ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಈ ಶಿಕ್ಷಕ ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ.

ಗಾರೆ ಕೆಲಸಕ್ಕೆ ಮುಂದಾಗಿರುವ ಶಿಕ್ಷಕರ ಹೆಸರು ದುಂಡಯ್ಯ. 45 ವರ್ಷದ ಇವರು ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು, 17 ವರ್ಷಗಳ ಕಾಲ ಸಾಕಷ್ಟು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನ ಕಲಿಸಿಕೊಟ್ಟಿದ್ದಾರೆ. ಇವರ ಕಲೆಗೆ ಮಾರುಹೋದ ಆರೋಗ್ಯ ಸಚಿವ ಶ್ರೀರಾಮುಲು ಅವರು ಇವರು ಬಿಡಿಸಿದ್ದ ಚಿತ್ರಗಳನ್ನ ಖರೀದಿಸಿ ಪ್ರೋತ್ಸಾಹ ತುಂಬಿದ್ದರು.

ವಿವಿಧ ಖಾಸಗಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿದು ಅಪಾರ ಅನುಭವ ಹೊಂದಿರುವ ದುಂಡಯ್ಯರವರಿಗೆ ಕೊರೊನಾ ಕೊಟ್ಟ ಶಾಕ್ ಬೀದಿಗೆ ಬೀಳುವಂತೆ ಮಾಡಿದೆ. ಕಳೆದ ನಾಲ್ಕು ತಿಂಗಳಿಂದ ಕೆಲಸವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದು ಸಂಸಾರ ನಡೆಸಲು ಗಾರೆ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತುಂಬು ಸಂಸಾರದ ನೊಗ ಎಳೆಯುತ್ತಿರುವ ದುಂಡಯ್ಯ ಅವರು, ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ ಎಂದು ಗಾರೆ ಕೆಲಸಕ್ಕೆ ಕೈ ಹಾಕಿದ್ದಾರೆ. ದಾರಿ ಕಾಣದೆ ಜಗುಲಿಯೊಂದರ ಮೇಲೆ ಕುಳಿತಿದ್ದಾಗ ಗಾರೆ ಕೆಲಸಕ್ಕೆ ಆಹ್ವಾನ ಬಂದಿದೆ. ಗೌರವಕ್ಕೆ ಅಂಜದೆ ಗಾರೆ ಕೆಲಸಕ್ಕೆ ಮುಂದಾಗಿ ಹೊಟ್ಟೆ ಪಾಡು ನೋಡುತ್ತಿದ್ದಾರೆ. ಡ್ರಾಯಿಂಗ್ ಮಾಡುತ್ತಿದ್ದ ಕೈಗಳಲ್ಲೀಗ ಗಾರೆ ಕರ್ಣಿ ಬಂದಿದೆ. ಕುಂಚ ಹಿಡಿಯುತ್ತಿದ್ದ ಕೈಗಳು ಇಟ್ಟಿಗೆ ಹೊರುವಂತಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಕ ವೃತ್ತಿ ಕೈ ಹಿಡಿಯದಿದ್ರೂ ಗಾರೆ ಕೆಲಸ ಕೈ ಹಿಡಿದಿದೆ. ತನ್ನ ಈ ಸ್ಥಿತಿಗೆ ಕೊರೊನಾ ಕಾರಣವಾದರೂ ಇಡೀ ವ್ಯವಸ್ಥೆಯ ಮೇಲೆ ಬೇಸರ ತಂದಿದೆ. ಶಿಕ್ಷಕರಿಗೆ ಉದ್ಯೋಗ ಕಲ್ಪಿಸದ ಚಿತ್ರಕಲಾ ಶಾಲೆಗಳು ಯಾಕೆ ಬೇಕು? ಶಿಕ್ಷಣ ಸಚಿವರಿಗೆ ನಮ್ಮಂತಹ ಬಡ ಶಿಕ್ಷಕರ ಪರಿಸ್ಥಿತಿ ಅರ್ಥವಾಗುತ್ತಿಲ್ಲವೇ ಎಂದು ಕಣ್ಣೀರಿಟ್ಟಿದ್ದಾರೆ.

ಕೊರೊನಾ ಮಹಾಮಾರಿ ತಂದ ಎಡವಟ್ಟು ಒಂದಲ್ಲ ಎರಡಲ್ಲ ಸಾಕಷ್ಟಿದೆ. ಖಾಸಗಿ ಶಾಲೆ ಶಿಕ್ಷಕರು ಕೆಲಸ ಮತ್ತು ಸಂಬಂಳವಿಲ್ಲದೇ ಸಾಕಷ್ಟು ನೊಂದಿದ್ದಾರೆ. ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಯನ್ನ ಅರ್ಥಮಾಡಿಕೊಂಡಿಲ್ಲ. ಶಾಲೆಯಿಂದ ಸಂಬಳ ಬರುತ್ತಿಲ್ಲ. ಸರ್ಕಾರ ತಿರುಗಿ ನೋಡುತ್ತಿಲ್ಲ. ಪರಿಣಾಮ ಸಾವಿರಾರು ಮಂದಿ ಖಾಸಗಿ ಶಾಲೆ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಕೂಡಲೇ ಸರ್ಕಾರ ಪರಿಹಾರ ನೀಡದಿದ್ದರೆ ಮತ್ತಷ್ಟು ಶಿಕ್ಷಕರು ಶೋಚನೀಯ ಪರಿಸ್ಥಿತಿ ತಲುಪಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *