ಕೊರೊನಾ ಎಫೆಕ್ಟ್- ಉಡುಪಿಯಲ್ಲಿ ಭಕ್ತರಿಗೆ ಮುದ್ರಾಧಾರಣೆ ಇಲ್ಲ

Public TV
1 Min Read

ಉಡುಪಿ: ಕೊರೊನಾ ಮಹಾಮಾರಿ ಸೋಂಕು ಉಡುಪಿಯಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ತಪ್ಪಿಸಿದೆ. ಕೃಷ್ಣಮಠದಲ್ಲಿ ಸಾಂಕೇತಿಕವಾಗಿ ತಪ್ತಮುದ್ರಾಧಾರಣೆ ಕಾರ್ಯಕ್ರಮ ನಡೆಸಲಾಗಿದೆ.

ಪ್ರಥಮ ಏಕಾದಶಿಯಂದು ಮುದ್ರಾಧಾರಣೆ ನಡೆಸುವುದು ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಈ ಬಾರಿ ಯಾವುದೇ ಭಕ್ತರಿಗೆ ಮುದ್ರಾಧಾರಣೆ ಮಾಡದೆ ಕೇವಲ ಯತಿಗಳು ಮಾತ್ರ ಪರಸ್ಪರ ಮುದ್ರಾಧಾರಣೆ ಮಾಡಿಸಿಕೊಂಡರು. ಕೊರೊನಾ ಬಂದ ನಂತರ ಲಾಕ್‍ಡೌನ್ ಘೋಷಣೆಯಾದ ಕ್ಷಣದಿಂದ ಉಡುಪಿ ಕೃಷ್ಣ ಮಠ ಮುಚ್ಚಿದೆ. ರಾಜ್ಯದ ಇತರ ಎಲ್ಲಾ ದೇವಾಲಯಗಳು ತೆರೆದಿದ್ದರೂ ಕೃಷ್ಣಮಠವನ್ನು ತೆರೆಯುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

ಮಠದೊಳಗೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲದ ಕಾರಣ ಮತ್ತು ಮುದ್ರಾಧಾರಣೆ ಮಾಡಿಸಿಕೊಳ್ಳಲು ಸಾವಿರಾರು ಜನ ಬರಬಹುದು ಎಂಬ ಕಾರಣಕ್ಕೆ ಸಾಮೂಹಿಕ ಮುದ್ರಾ ಧಾರಣೆಯನ್ನು ರದ್ದುಗೊಳಿಸಲಾಗಿತ್ತು. ಸಂಪ್ರದಾಯದಂತೆ ಸುದರ್ಶನ ಹೋಮವನ್ನು ನಡೆಸಿ ಅಷ್ಟ ಮಠಾಧೀಶರ ಪೈಕಿ ಹಾಜರಿದ್ದ ಅದಮಾರು, ಪಲಿಮಾರು ಕಾಣಿಯೂರು ಸ್ವಾಮೀಜಿಗಳು ಪರಸ್ಪರ ಮುದ್ರಾಧಾರಣೆ ಮಾಡಿಕೊಂಡರು.

ಕೃಷ್ಣಮಠ ತೆರೆದ ನಂತರ ಚಾತುರ್ಮಾಸ್ಯದ ಅವಧಿಯಲ್ಲಿ ಯಾವುದಾದರೂ ಶುಭದಿನದಂದು ಭಕ್ತರಿಗೆ ಮುದ್ರಾಧಾರಣೆ ನಡೆಸಲು ತೀರ್ಮಾನಿಸಲಾಗಿದೆ. ಮುದ್ರಾಧಾರಣೆಯಂತಹಾ ಸಾಂಪ್ರದಾಯಿಕ ಆಚರಣೆಗೂ ಕೊರೊನಾ ಕುತ್ತು ತಂದಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *