– ಕೊನೇ ದಿನದ ಪರೀಕ್ಷೆಗೆ ಶೇ.99.65 ವಿದ್ಯಾರ್ಥಿಗಳು ಹಾಜರ್
– ಆಗಸ್ಟ್ 10ರ ಆಸುಪಾಸಿನಲ್ಲಿ ಫಲಿತಾಂಶಕ್ಕೆ ಇಲಾಖೆ ಸಿದ್ಧತೆ
ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಒಂದಡೆ ಪರೀಕ್ಷೆ ನಡೆಸಿ ಶಿಕ್ಷಣ ಇಲಾಖೆ ಗೆದ್ದಿದ್ದರೆ, ಮತ್ತೊಂದಡೆ ವಿದ್ಯಾರ್ಥಿಗಳು ಕೊರೊನಾ ಬ್ಯಾಚ್ ಎಂಬ ಕಳಂಕದಿಂದ ತಪ್ಪಿಸಿಕೊಂಡಿದ್ದಾರೆ. ಇಂದು ಯಾವುದೇ ವಿಘ್ನವಿಲ್ಲದೇ ಕೊನೆ ಪರೀಕ್ಷೆ ಮುಗಿದಿದೆ.
ಕೊರೊನಾ ಕಾರ್ಮೋಡದ ಮಧ್ಯೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿ, ಶಿಕ್ಷಣ ಇಲಾಖೆ ಸಕ್ಸಸ್ ಆಗಿದೆ. ಕೊರೊನಾ ಹೊಡೆತಕ್ಕೆ ನಲುಗಿದ್ದ ಸರ್ಕಾರ, ಹೆಮ್ಮಾರಿ ವೈರಸ್ ಗೆ ಹೆದರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿತ್ತು. ಆದರೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯದ ವಿಚಾರಕ್ಕೆ ಶಿಕ್ಷಣ ಇಲಾಖೆ, ಕೊರೊನಾಗೆ ಸೆಡ್ಡು ಹೊಡೆದು ಎರಡು ದಿನದ ಕಾಲ ಪರೀಕ್ಷೆ ನಡೆಸಿ, ಯಶಸ್ವಿಯಾಗಿದೆ.
ಇಂದು ರಾಜ್ಯಾದ್ಯಂತ ಕೊನೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವುದೇ ಅಡ್ಡಿ ಆಂತಕ ಇಲ್ಲದೆ ಮುಗಿದಿದ್ದು, ಇಂದು ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್, ಹಿಂದಿ ಮೂರು ವಿಷಯಗಳ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಒಟ್ಟು ಮೂರು ವಿಷಯಗಳಿಗೆ 120 ಅಂಕಗಳ ಒಳಗೊಂಡು, ಅಬ್ಜೆಕ್ಟಿವ್ ಮಾದರಿಯಲ್ಲಿ, ಒಎಂಆರ್ ಶೀಟ್ ನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಿತು.
ಕಳೆದ ಬಾರಿಗಿಂತ ಈ ಬಾರಿ, ಪರೀಕ್ಷೆಯ ಹಾಜರಾತಿ ಹೆಚ್ಚಿತ್ತು. ಎರಡನೇ ದಿನದ ಹಾಜರಾತಿ ಶೇ.99.65 ನಷ್ಟಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಉತ್ಸುಕತೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು.
ಪ್ರಥಮ ಭಾಷೆ ಪರೀಕ್ಷೆಗೆ 8,19,694 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 8,16,544 ಜನ ಹಾಜರಾಗಿದ್ದರು. 3,150 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು ಹಾಜರಾತಿ ಶೇ.99.62ರಷ್ಟಿತ್ತು. ದ್ವಿತೀಯ ಭಾಷೆ ಪರೀಕ್ಷೆಗೆ 8,27,988 ಅಭ್ಯರ್ಥಿಗಳ ನೋಂದಣಿಯಾಗಿತ್ತು. 8,24,686 ಜ ಪರೀಕ್ಷೆಗೆ ಹಾಜರಾದರೆ, 3302 ಜನ ಗೈರಾಗಿದ್ದರು. ಒಟ್ಟು ಹಾಜರಾತಿ ಶೇ.99.60 ರಷ್ಟು ದಾಖಲಾಗಿದೆ. ತೃತೀಯ ಭಾಷೆ ಪರೀಕ್ಷೆಗೆ 8,17,640 ಜನ ನೋಂದಣಿಯಾಗಿದ್ದರು. 8,14,538 ಜನ ಪರೀಕ್ಷೆ ಬರೆದಿದ್ದಾರೆ. 3102 ಗೈರಾಗಿದ್ದಾರೆ. ಒಟ್ಟು ಹಾಜರಾತಿ ಶೇ.99.62 ಇತ್ತು.
ಕೋವಿಡ್ ಕೇರ್ ಸೆಂಟರ್ ನಿಂದ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 152 ಜನ ಐಸೋಲೇಷನ್ ಕೊಠಡಿಯಲ್ಲಿ ಬರೆದಿದ್ದಾರೆ. 10,693 ಜನ ಪರೀಕ್ಷಾ ಕೇಂದ್ರ ಬದಲಸಿ ಪರೀಕ್ಷೆ ಬರೆದಿದ್ದಾರೆ. 2,870 ಜನ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದಲೇ ಪರೀಕ್ಷೆ ಬರೆದಿದ್ದಾರೆ.
ಕೊರೊನಾ ನಡುವೆ ಪರೀಕ್ಷೆ ಮುಗಿಸಿರುವ ಶಿಕ್ಷಣ ಇಲಾಖೆ, ಆಗಸ್ಟ್ 10ರ ಆಸುಪಾಸಿನಲ್ಲಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೋವಿಡ್ ಸಮಯದಲ್ಲಿ ಈ ಶೈಕ್ಷಣಿಕ ವರ್ಷದ ಪರೀಕ್ಷೆಯನ್ನು ಬರೆದು ವಿದ್ಯಾರ್ಥಿಗಳು ಫುಲ್ ರಿಲೀಫ್ ಆಗಿದ್ದಾರೆ.